ಅಂತರಾಷ್ಟ್ರೀಯ

ಇತಿಹಾಸ ಬರೆದ ಆಫ್ಘಾನಿಸ್ತಾನ ತಂಡ ! ವಿಂಡೀಸ್‌ಗೆ ಆಘಾತ ನೀಡಿದ ಆಫ್ಘಾನಿಸ್ತಾನ ತಂಡಕ್ಕೆ ಆರು ರನ್‌ಗಳ ಅಪೂರ್ವ ಗೆಲುವು

Pinterest LinkedIn Tumblr

Afghanistan's players celebrate after the wicket of West Indies's batsman Andre Russell during the World T20 cricket tournament match between West Indies and Afghanistan at The Vidarbha Cricket Association Stadium in Nagpur on March 27, 2016. / AFP / PUNIT PARANJPE

ನಾಗಪುರ (ಪಿಟಿಐ): ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ವೆಸ್ಟ್‌ ಇಂಡೀಸ್‌ ತಂಡವನ್ನು ಅತ್ಯಂತ ಚಾಣಾಕ್ಷತನದಿಂದ ಮಣಿಸಿದ ‘ಕ್ರಿಕೆಟ್‌ ಲಿಲ್ಲಿಪುಟ್‌’ ಆಫ್ಘಾನಿಸ್ತಾನ ತಂಡ ಭಾನುವಾರ ಇತಿಹಾಸ ಬರೆದಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆಯುತ್ತಿರುವ ಆಫ್ಘಾನಿಸ್ತಾನ ತಂಡ ಆಡುತ್ತಿರುವ ನಾಲ್ಕನೇ ವಿಶ್ವ ಟೂರ್ನಿ ಇದು. 2010, 2012 ಮತ್ತು 2014ರ ಟೂರ್ನಿಗಳಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.

ಈ ಬಾರಿಯೂ ಇದೇ ಹಂತದಲ್ಲಿ ಹೋರಾಟ ಮುಗಿಸಿದೆಯಾದರೂ, ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ವೆಸ್ಟ್‌ ಇಂಡೀಸ್ ತಂಡವನ್ನು ಮಣಿಸಿ ಅಪೂರ್ವ ಸಾಧನೆ ಮಾಡಿತು. ಟೆಸ್ಟ್‌ ಆಡುವ ರಾಷ್ಟ್ರದ ಎದುರು ಪಡೆದ ಚೊಚ್ಚಲ ಗೆಲುವು ಇದು. ಇಲ್ಲಿನ ವಿದರ್ಭ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಫ್ಘಾನಿಸ್ತಾನ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 123 ರನ್ ಕಲೆ ಹಾಕಿತು.

ಈ ಅಲ್ಪ ಮೊತ್ತವೇ 2012ರ ಟೂರ್ನಿಯ ಚಾಂಪಿಯನ್ ವೆಸ್ಟ್‌ ಇಂಡೀಸ್‌ಗೆ ಬೆಟ್ಟದಂಥ ಸವಾಲು ಎನಿಸಿತು. ವಿಂಡೀಸ್‌ ಅಂತಿಮವಾಗಿ ನಿಗದಿತ ಓವರ್‌ಗಳು ಮುಗಿದಾಗ 117 ರನ್‌ಗಳನ್ನಷ್ಟೇ ಗಳಿಸಿತ್ತು. ಆಫ್ಘಾನಿಸ್ತಾನ ತಂಡ 2001ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ ಸಹ ಸದಸ್ಯ ಪಡೆದುಕೊಂಡಿದೆ. ಬಳಿಕ ಆಡಿದ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ತೋರಿದೆ. ಇದೇ ವಿಶ್ವ ಟೂರ್ನಿಯಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾ ಎದುರು ಸೋಲು ಕಂಡಿತ್ತಾದರೂ, ಆ ಪಂದ್ಯಗಳಲ್ಲಿ ಆಡಿದ ರೀತಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.
ಆಫ್ಘಾನಿಸ್ತಾನ ತಂಡದ ದಿಟ್ಟ ಆಟ ಕೊನೆಯ ಲೀಗ್ ಪಂದ್ಯದಲ್ಲಿಯೂ ಮುಂದುವರಿಯಿತು.

ಈ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕಾಡಿತು. ಉಸ್ಮಾನ್‌ ಗನಿ (4), ಗುಲ್ಬಾದಿನ್‌ ನಬಿ (8), ಸಮೀಯುಲ್ಲಾ ಶೆನ್ವಾರಿ (1) ಬೇಗನೆ ಔಟಾದರು. ಮೊಹಮ್ಮದ್‌ ಶೆಹ್ಜಾದ್‌ (24) ಮತ್ತು ನಜೀಬುಲ್ಲಾ ಜದ್ರಾನ್‌ (48, 45 ನಿಮಿಷ, 40 ಎಸೆತ, 4 ಬೌಂಡರಿ, 1 ಸಿಕ್ಸರ್‌) ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಆ್ಯಂಡ್ರೆ ರಸೆಲ್‌, ಸ್ಯಾಮುಯೆಲ್‌ ಬದ್ರಿ ಮತ್ತು ಸುಲೆಮಾನ್‌ ಅವರ ಚುರುಕಿನ ದಾಳಿಯನ್ನು ಆಫ್ಘಾನಿಸ್ತಾನ ಬ್ಯಾಟ್ಸ್‌ಮನ್‌ಗಳು ಸಮರ್ಥವಾಗಿ ಎದುರಿಸಿದರು.

ಪರದಾಟ: ಈ ಪಂದ್ಯ ಆಡುವ ಮೊದಲೇ ಸೆಮಿಫೈನಲ್‌ ತಲುಪಿದ್ದ ಕಾರಣ ವಿಂಡೀಸ್ ತಂಡ ಕ್ರಿಸ್‌ ಗೇಲ್ ಅವರನ್ನು ಕಣಕ್ಕಿಳಿಸಿರಲಿಲ್ಲ.
ಜಾನ್ಸನ್‌ ಚಾರ್ಲಸ್‌ (22), ಎವಿನ್‌ ಲೆವಿಸ್ (0), ಆ್ಯಂಡ್ರೆ ಫ್ಲೆಚರ್ (11) ಮತ್ತು ಮರ್ಲಾನ್‌ ಸ್ಯಾಮುಯೆಲ್ಸ್‌ (5) ಬೇಗನೆ ಔಟಾಗಿದ್ದರಿಂದ ವಿಂಡೀಸ್‌ ಪರದಾಡಿತು. ಇದಕ್ಕೆ ಕಾರಣವಾಗಿದ್ದು ಆಫ್ಘಾನಿಸ್ತಾನ ತಂಡದ ಕರಾರುವಾಕ್ಕಾದ ಬೌಲಿಂಗ್ ಮತ್ತು ಚುರುಕಿನ ಫೀಲ್ಡಿಂಗ್.
ಈ ತಂಡದ ಅಮೀರ್ ಹಮ್ಜಾ ನಾಲ್ಕು ಓವರ್ ಬೌಲ್‌ ಮಾಡಿ ಒಂದು ವಿಕೆಟ್‌ ಪಡೆದು ಒಂಬತ್ತು ರನ್‌ಗಳನ್ನಷ್ಟೇ ಕೊಟ್ಟರು. ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್‌ ತಲಾ ಎರಡು ವಿಕೆಟ್‌ ಪಡೆದು ಜಯಕ್ಕೆ ಕಾರಣರಾದರು.

ರೋಚಕ ಓವರ್‌: ವಿಂಡೀಸ್ ತಂಡದ ಜಯಕ್ಕೆ ಕೊನೆಯ ಓವರ್‌ನಲ್ಲಿ ಹತ್ತು ರನ್ ಅಗತ್ಯವಿತ್ತು. ಆಫ್ಘಾನಿಸ್ತಾನ ತಂಡದ ನಾಯಕ ಅಸ್ಗರ್‌ ದಿಟ್ಟ ನಿರ್ಧಾರ ಮಾಡಿ ನಬಿ ಕೈಗೆ ಚೆಂಡು ನೀಡಿದರು.

ಮೊದಲ ಎರಡು ಎಸೆತಗಳಲ್ಲಿ ನಬಿ ರನ್ ನೀಡಲಿಲ್ಲ. ಮೂರನೇ ಎಸೆತದಲ್ಲಿ ಬ್ರಾಥ್‌ವೈಟ್‌ ಅವರನ್ನು ಔಟ್‌ ಮಾಡಿದರು. ಕೊನೆಯ ಮೂರು ಎಸೆತಗಳಲ್ಲಿ ನಾಲ್ಕು ರನ್‌ಗಳಷ್ಟೇ ನೀಡಿ ಜಯಕ್ಕೆ ಕಾರಣರಾದರು. ಈ ವೇಳೆ ಆಫ್ಘಾನಿಸ್ತಾನ ಆಟಗಾರರರು ಟ್ರೋಫಿ ಗೆದ್ದಷ್ಟೇ ಸಂಭ್ರಮದಿಂದ ಕುಣಿದಾಡಿದರು. ಗ್ಯಾಲರಿಯಲ್ಲಿದ್ದ ಈ ತಂಡದ ಅಭಿಮಾನಿಗಳ ಸಂಭ್ರಮವೂ ಮುಗಿಲು ಮುಟ್ಟಿತ್ತು.

ಸ್ಕೋರ್‌ಕಾರ್ಡ್‌
ಆಫ್ಘಾನಿಸ್ತಾನ 7 ಕ್ಕೆ 123 (20 ಓವರ್‌ಗಳಲ್ಲಿ)
ಮೊಹಮ್ಮದ್ ಶೆಹ್ಜಾದ್‌ ಸಿ. ಸುಲೇಮಾನ್ ಬೆನ್ ಬಿ. ಸ್ಯಾಮುಯೆಲ್‌ ಬದ್ರಿ 24
ಉಸ್ಮಾನ್ ಗನಿ ಬಿ. ಸ್ಯಾಮುಯಲ್ ಬದ್ರಿ 04
ಅಸ್ಗರ್‌ ಸ್ಟಾನಿಕ್‌ಜಾಯ್‌ ಸಿ. ಡ್ವೇನ್‌ ಬ್ರಾವೊ ಬಿ. ಸ್ಯಾಮುಯೆಲ್‌ ಬದ್ರಿ 16
ಗುಲ್ಬಾದಿನ್‌ ನಬಿ ಸಿ. ಡ್ವೇನ್‌ ಬ್ರಾವೊ ಬಿ. ಡರೆನ್‌ ಸಮಿ 08
ಸಮೀವುಲ್ಲಾ ಶೆನ್ವಾರಿ ಸಿ. ಡರನ್‌ ಸಮಿ ಬಿ. ಸುಲೇಮಾನ್ ಬೆನ್‌ 01
ನಜೀಬುಲ್ಲಾ ಜದ್ರಾನ್‌ ಔಟಾಗದೆ 48
ಮೊಹಮ್ಮದ್ ನಬಿ ಸಿ. ಸ್ಯಾಮುಯೆಲ್‌ ಬದ್ರಿ ಬಿ. ಆ್ಯಂಡ್ರೆ ರಸೆಲ್‌ 09
ಶಫೀಕುಲ್ಲಾ ಸಿ. ಆ್ಯಂಡ್ರೆ ಫ್ಲೆಚರ್ ಬಿ. ಆ್ಯಂಡ್ರೆ ರಸೆಲ್‌ 04
ರಶೀದ್‌ ಖಾನ್‌ ಔಟಾಗದೆ 06
ಇತರೆ: (ಲೆಗ್ ಬೈ–2, ವೈಡ್‌–1) 03

ವಿಕೆಟ್‌ ಪತನ: 1–5 (ಉಸ್ಮಾನ್; 1.5), 2–33 (ಶೆಹ್ಜಾದ್; 5.6), 3–50 (ಅಸ್ಗರ್‌; 9.3), 4–52 (ಸಮೀವುಲ್ಲಾ; 10.2), 5–56 (ಗುಲ್ಬಾದಿನ್‌; 11.5), 6–90 (ನಬಿ; 16.3). 7–103 (ಶಫೀಕುಲ್ಲಾ; 18.1).

ಬೌಲಿಂಗ್‌: ಆ್ಯಂಡ್ರೆ ರಸೆಲ್‌ 4–0–23–2, ಸ್ಯಾಮುಯೆಲ್ ಬದ್ರಿ 4–0–14–3, ಚಾರ್ಲಸ್ ಬ್ರಾಥ್‌ವೈಟ್‌ 2–0–21–0, ಸುಲೇಮನ್ ಬೆನ್‌ 4–0–18–1, ಡ್ವೇನ್ ಬ್ರಾವೊ 4–0–28–0, ಡರನ್ ಸಮಿ 2–0–17–1.
ವೆಸ್ಟ್‌ ಇಂಡೀಸ್‌ 8 ಕ್ಕೆ 117 (20 ಓವರ್‌ಗಳಲ್ಲಿ)

ಜಾನ್ಸನ್ ಚಾರ್ಲೆಸ್‌ ಬಿ. ಹಮೀದ್ ಹಸನ್‌ 22
ಎವಿನ್‌ ಲೆವಿಸ್ ಸಿ. ರಶೀದ್‌ ಖಾನ್‌ ಬಿ. ಅಮೀರ್ ಹಮ್ಜಾ 00
ಆ್ಯಂಡ್ರೆ ಫ್ಲೆಚರ್‌ ಔಟಾಗದೆ 11
ಮರ್ಲಾನ್‌ ಸ್ಯಾಮುಯೆಲ್ಸ್‌ ಬಿ. ರಶೀದ್‌ ಖಾನ್‌ 05
ದಿನೇಶ್‌ ರಾಮ್ದಿನ್‌ ಸ್ಟಂಪ್ಡ್‌ ಮೊಹಮ್ಮದ್‌ ಶೆಹ್ಜಾದ್‌ ಬಿ. ರಶೀದ್‌ ಖಾನ್‌ 18
ಡ್ವೇನ್ ಬ್ರಾವೊ ಎಲ್‌ಬಿಡಬ್ಲ್ಯು ಬಿ. ಮೊಹಮ್ಮದ್ ನಬಿ 28
ಆ್ಯಂಡ್ರೆ ರಸೆಲ್‌ ರನ್‌ ಔಟ್‌ (ರಶೀದ್‌ ಖಾನ್‌/ಮೊಹಮ್ಮದ್ ಶೆಹ್ಜಾದ್) 07
ಡರೆನ್ ಸಮಿ ಸಿ. ಸಮೀವುಲ್ಲಾ ಶೆನ್ವಾರಿ ಬಿ. ಗುಲ್ಬಾದಿನ್ ನಬಿ 06
ಚಾರ್ಲಸ್‌ ಬ್ರಾಥ್‌ವೈಟ್‌ ಸಿ. ನಜೀಬುಲ್ಲಾ ಜದ್ರಾನ್ ಬಿ. ಮೊಹಮ್ಮದ್ ನಬಿ 13
ಸ್ಯಾಮುಯೆಲ್‌ ಬದ್ರಿ ಔಟಾಗದೆ 02
ಇತರೆ: (ಲೆಗ್‌ ಬೈ–1, ವೈಡ್–2, ನೋ ಬಾಲ್‌–2) 05

ವಿಕೆಟ್‌ ಪತನ: 1–17 (ಲೆವಿಸ್‌; 2.3), 2–33 (ಚಾರ್ಲಸ್; 5.3), 3–38 (ಸ್ಯಾಮುಯೆಲ್ಸ್‌; 6.2), 4–79 (ಬ್ರಾವೊ; 13.6), 5–89 (ರಾಮ್ದಿನ್‌; 15.6), 6–98 (ರಸೆಲ್‌; 17.3), 7–107 (ಸಮಿ; 18.4), 8–114 (ಬ್ರಾಥ್‌ವೈಟ್‌; 19.3).

ಬೌಲಿಂಗ್‌: ಅಮೀರ್ ಹಮ್ಜಾ 4–0–9–1, ಮೊಹಮ್ಮದ್ ನಬಿ 4–0–26–2, ಹಮೀದ್‌ ಹಸನ್ 2.4–0–19–1, ರಶೀದ್‌ ಖಾನ್‌ 4–0–26–2, ಸಮೀವುಲ್ಲಾ ಶೆನ್ವಾರಿ 4–0–22–0, ಗುಲ್ಬಾದಿನ್‌ ನಬಿ 1.2–0–14–1.

ಫಲಿತಾಂಶ: ಆಫ್ಘಾನಿಸ್ತಾನಕ್ಕೆ 6 ರನ್ ಗೆಲುವು ಹಾಗೂ ಎರಡು ಪಾಯಿಂಟ್ಸ್‌
ಪಂದ್ಯಶ್ರೇಷ್ಠ: ನಜೀಬುಲ್ಲಾ ಜದ್ರಾನ್‌.

Write A Comment