ರಾಷ್ಟ್ರೀಯ

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದರೆ, ಉಗುಳಿದರೆ 5 ಸಾವಿರ ದಂಡ ! ನಗರಾಭಿವೃದ್ಧಿ ಸಚಿವಾಲಯದಿಂದ ರಾಜ್ಯಗಳಿಗೆ ನಿರ್ದೇಶನ

Pinterest LinkedIn Tumblr

urine-litting-public-place

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದು, ಮಲವಿಸರ್ಜನೆ ಮಾಡಿದರೆ ಅಂತವರಿಗೆ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಸರ್ಕಾರ ಹೊರಟಿದೆ.

ಇಂತಹ ಕಟ್ಟುನಿಟ್ಟಿನ ಆದೇಶ ಹೊರಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದು ಕಂಡುಬಂದರೆ ಕೂಡಲೇ ಅಲ್ಲಿ ದಂಡ ವಿಧಿಸಬೇಕೆಂದು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನ ಇದುವರೆಗೆ ನಿರೀಕ್ಷಿತ ಫಲಿತಾಂಶ ನೀಡಿಲ್ಲದಿರುವುದರಿಂದ ಅದರಲ್ಲೂ ನಗರ ಪ್ರದೇಶಗಳಲ್ಲಿಯೇ ಸ್ವಚ್ಚ ಭಾರತ್ ಅಭಿಯಾನ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಕಟ್ಟುನಿಟ್ಟಾಗಿ ನಿಯಮ ಜಾರಿಗೆ ತರಲು ಹೊರಟಿದೆ.

ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು, ಮೂತ್ರ ವಿಸರ್ಜಿಸುವುದು ಕಂಡು ಬಂದಲ್ಲಿ 200ರೂಪಾಯಿಯಿಂದ 5 ಸಾವಿರ ರೂಪಾಯಿವರೆಗೆ ದಂಡ ಪಾವತಿಸಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಏಪ್ರಿಲ್ 30ರೊಳಗೆ ಕನಿಷ್ಠ ಪಕ್ಷ ಪ್ರತಿ ಒಂದು ವಾರ್ಡ್ ನಲ್ಲಿ ದಂಡ ವಿಧಿಸುವಂತೆ ನಗರಾಭಿವೃದ್ಧಿ ಸಚಿವಾಲಯ ಎಲ್ಲಾ ರಾಜ್ಯದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಈ ವರ್ಷಾಂತ್ಯದೊಳಗೆ 10ರಿಂದ 15 ನಗರಗಳಲ್ಲಿ ಎಲ್ಲಾ ವಾರ್ಡ್ ಗಳಲ್ಲಿಯೂ ದಂಡ ವಿಧಿಸಬೇಕು. 2018ರ ಸೆಪ್ಟೆಂಬರ್ 30ರೊಳಗೆ ಎಲ್ಲಾ ನಗರಗಳ ಎಲ್ಲಾ ವಾರ್ಡ್ ಗಳಲ್ಲಿಯೂ ದಂಡ ವಿಧಿಸುವ ಪ್ರಕ್ರಿಯೆ ನಡೆಯಬೇಕು ಎಂದು ಹೇಳಿದೆ.

ಆದರೆ ಸರ್ಕಾರದ ಈ ಆದೇಶಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಗಳಲ್ಲಿ ಮೊದಲು ಸರಿಯಾದ ಶೌಚಾಲಯ ವ್ಯವಸ್ಥೆ ನೀಡಲಿ. ನಗರಗಳಲ್ಲಿ ಪ್ರತಿ ಕಿಲೋ ಮೀಟರ್ ಗೆ ಒಂದರಂತೆ ಶೌಚಾಲಯಗಳನ್ನು ನಿರ್ಮಿಸಲಿ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆಯಿರಲಿ. ಪ್ರತಿ ಶೌಚಾಲಯಗಳು ಸ್ವಚ್ಛವಾಗಿದ್ದು, ನೀರಿನ ಪೂರೈಕೆಯೂ ಸರಿಯಾಗಿರಬೇಕು ಎನ್ನುತ್ತಾರೆ ಸಾರ್ವಜನಿಕ ಶೌಚಾಲಯ ಸುಲಭ್ ಇಂಟರ್ ನ್ಯಾಷನಲ್ ನ ಸ್ಥಾಪಕ ಬಿಂದೇಶ್ವರ ಪಾಠಕ್.

Write A Comment