
ಬೆಂಗಳೂರು: ಎಂತಹ ಕಠಿಣ ಪಂದ್ಯವೇ ಆಗಿದ್ದರೂ ಕೂಲ್ ಆಗಿ ಪರಿಸ್ಥಿತಿ ನಿಭಾಯಿಸುವ ಭಾರತ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಾಂಗ್ಲಾದೇಶ ವಿರುದ್ಧ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ನಿಜಕ್ಕೂ ಗರಂ ಆಗಿದ್ದರು.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಕೊನೆಯ ಓವರ್ ನಲ್ಲಿ 1 ರನ್ ಅಂತರದಲ್ಲಿ ರೋಚಕ ಜಯ ಸಾಧಿಸಿತ್ತು. ಪಂದ್ಯದ ಯಾವುದೇ ಹಂತದಲ್ಲಿಯೂ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ತಮ್ಮ ಉದ್ವೇಗಕ್ಕೊಳಗಾಗಲಿಲ್ಲ. ಕೊನೆಯ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯಾ ಸತತ 2 ಬೌಂಡರಿ ಹೊಡೆಸಿಕೊಂಡಾಗಲೂ ಧೋನಿ ಕೂಲ್ ಆಗಿಯೇ ಇದ್ದರು. ಆದರೆ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ್ರ ಕೂಲ್ ಕ್ಯಾಪ್ಟನ್ ಧೋನಿ ನಿಜಕ್ಕೂ ರಾಂಗ್ ಆಗಿದ್ದರು. ಪತ್ರಕರ್ತನೋರ್ವ ಕೇಳಿದ ಪ್ರಶ್ನೆ ಮಹೇಂದ್ರ ಸಿಂಗ್ ಧೋನಿಗೆ ಸಿಟ್ಟು ತರಿಸಿತ್ತು.
ನಿಜಕ್ಕೂ ಮಹೇಂದ್ರ ಸಿಂಗ್ ಧೋನಿ ಸಿಟ್ಟಾಗಿದ್ದೇಕೆ?
ಹಿಂದೆಲ್ಲಾ ಸಾಕಷ್ಟು ಪತ್ರಿಕಾಗೋಷ್ಠಿಗಳಲ್ಲಿ ಧೋನಿ ಪತ್ರಕರ್ತರಿಂದ ಮುಜುಗರದ ಪ್ರಶ್ನೆಗಳನ್ನು ಎದುರಿಸಿದ್ದರಾದರೂ, ಈ ಪರಿ ಸಿಟ್ಟಾಗಿರಲಿಲ್ಲ. ಆದರೆ ನಿನ್ನೆ ನಿಜಕ್ಕೂ ಧೋನಿ ಪ್ರಶ್ನೆ ಕೇಳಿದ ಪತ್ರಕರ್ತನ ಮುಖದ ಮೇಲೆ ನೀರು ಇಳಿಸಿದ್ದರು. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಗೆ ಆಗಮಿಸಿದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪತ್ರಕರ್ತನೋರ್ವ, “ದೊಡ್ಡಮಟ್ಟದ ಗೆಲುವು ಸಾಧಿಸಿಬೇಕಿದ್ದ ತಮಗೆ ಪ್ರಸ್ತುತ ಗೆಲುವು ಎಷ್ಟರ ಮಟ್ಟಿಗೆ ಸಮಾಧಾನ ತಂದಿದೆ” ಎಂದು ಕೇಳಿದ್ದ. ಇದು ಧೋನಿ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು.
ಈ ಪ್ರಶ್ನೆಗೆ ಪತ್ರಕರ್ತನ ಧಾಟಿಯಲ್ಲೇ ಉತ್ತರಿಸಿದ ಧೋನಿ, ನನಗೆ ಗೊತ್ತು ಭಾರತ ತಂಡದ ಗೆಲುವು ನಿಮಗೆ ಖುಷಿ ನೀಡಿಲ್ಲ ಎಂದು ಹೇಳಿದರು. ಧೋನಿ ಅವರಿಂದ ಇಂತಹ ಪ್ರತಿಕ್ರಿಯೆ ನಿರೀಕ್ಷಿಸದ ಪತ್ರಕರ್ತ ತನ್ನ ಪ್ರಶ್ನೆಗೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾದನಾದರೂ, ಧೋನಿ ಸಿಟ್ಟು ಮಾತ್ರ ಇಳಿದಿರಲಿಲ್ಲ. ಹೀಗಾಗಿ ಪತ್ರಕರ್ತನನ್ನು ಅಷ್ಟಕ್ಕೇ ತಡೆದು, “ಮೊದಲು ನನ್ನ ಮಾತನ್ನು ಕೇಳಿ, ನಿಮ್ಮ ಪ್ರಶ್ನೆ ಮತ್ತು ಹಾವಭಾವವನ್ನು ನೋಡಿದರೆ ಭಾರತ ತಂಡದ ಗೆಲುವಿನಿಂದಾಗಿ ನೀವು ಸಂತುಷ್ಠರಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಇನ್ನು ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ ಪಂದ್ಯವನ್ನಾಡುವಾಗ ನಾವ್ಯಾರೂ ಸ್ಕ್ರಿಪ್ಟ್ ಗಳನ್ನು ಇಟ್ಟುಕೊಂಡು ಪಂದ್ಯವಾಡುವುದಿಲ್ಲ. ಈ ಎಸೆತ ಹೀಗೇ ಇರಬೇಕು. ಇದೇ ಎಸೆತದಲ್ಲಿ ವಿಕೆಟ್ ಬೀಳಬೇಕು ಎಂದು ಬರೆದಿಟ್ಟುಕೊಂಡು ಕ್ರಿಕೆಟ್ ಆಡುವುದಿಲ್ಲ ಎಂದು ಗರಂ ಆಗಿ ಹೇಳಿದರು.
ಮತ್ತೆ ತಮ್ಮ ಮಾತನ್ನು ಮುಂದುವರೆಸಿದ ಧೋನಿ, ಪಂದ್ಯದ ಕುರಿತು ಅವಲೋಕಿಸಬೇಕಿರುವುದು ನೀವು. ಟಾಸ್ ಸೋತ ಬಳಿಕ ನಾವ್ಯಾಕೆ ಹೆಚ್ಚೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂಬಿತ್ಯಾದಿ ವಿಚಾರಗಳಲ್ಲಿ ವಿಚಾರ ಮಾಡಬೇಕಿತ್ತು. ಇದಾವುದನ್ನೂ ಮಾಡದೇ ಹೊರಗಡೆ ನಿಂತು ಪಂದ್ಯ ನೋಡಿ, ಬಳಿಕ ಈ ರೀತಿ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ ಎಂದು ಧೋನಿ ಹೇಳಿದರು. ಅತ್ತ ಧೋನಿ ಗರಂ ಆಗುತ್ತಿದ್ದಂತೆಯೇ ನಿರ್ವಾಹಕರು ಪತ್ರಕರ್ತನಿಗೆ ಮರು ಪ್ರಶ್ನೆ ಕೇಳುವ ಅವಕಾಶ ನೀಡಲು ಅವಕಾಶ ನೀಡಲಿಲ್ಲ.