ರಾಷ್ಟ್ರೀಯ

ಪ್ರತಿಯೊಬ್ಬರು ‘ಭಾರತ್ ಮಾತಾ ಕಿ ಜೈ’ ಹೇಳುವಂತೆ ಕಾನೂನು ತಿದ್ದುಪಡಿ ಮಾಡಿ: ರಾಮ್ ದೇವ್

Pinterest LinkedIn Tumblr

Ramdev

ವಡೋದರಾ: ಪ್ರತಿಯೊಬ್ಬರು ‘ಭಾರತ್ ಮಾತಾ ಕಿ ಜೈ’ ಹೇಳುವಂತೆ ಕಾನೂನು ತಿದ್ದುಪಡಿ ಮಾಡಿ ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಗುರುವಾರ ಹೇಳಿದ್ದಾರೆ.

ಕುತ್ತಿಗೆ ಮೇಲೆ ಕತ್ತಿ ಇಟ್ಟರೂ ‘ಭಾರತ್ ಮಾತಾ ಕಿ ಜೈ’ ಹೇಳೋಲ್ಲ ಎಂದು ಹೇಳಿದ್ದ ಅಸಾಸುದ್ದೀನ್ ಓವೈಸಿ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಜನಾಂಗೀಯ ಘರ್ಷಣೆಗಳನ್ನು ತಡೆಯಬೇಕೆಂದರೆ ಮೊದಲು ಗೋಹತ್ಯೆಯನ್ನು ಇಡೀ ದೇಶದಾದ್ಯಂತ ನಿಷೇಧಿಸಬೇಕು ಮತ್ತು ಪ್ರತಿಯೊಬ್ಬರೂ ‘ಭಾರತ್ ಮಾತಾ ಕಿ ಜೈ’ ಎಂದು ಹೇಳುವಂತೆ ಕಾನೂನನ್ನು ತಿದ್ದುಪಡಿ ತರಬೇಕು ಎಂದು ಹೇಳಿದ್ದಾರೆ.

ಓವೈಸಿಯವರು ಭಾರತ್ ಮಾತಾ ಕಿ ಜೈ ಎಂದು ಹೇಳಬೇಕೆಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದರು. ಭಾರತ್ ಮಾತಾ ಕಿ ಜೈ ಎಂದು ಹೇಳಲು ಸಮಸ್ಯೆಯಿಲ್ಲ. ಆದರೆ, ಈ ಬಗ್ಗೆ ಕಾನೂನು ತಿದ್ದುಪಡಿ ಮಾಡಿ ಪ್ರತಿಯೊಬ್ಬರು ಹೇಳುವಂತೆ ಮಾಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡುವುದೇನೆಂದರೆ ಮೋದಿಯವರು ಗೋಹತ್ಯೆಯನ್ನು ಇಡೀ ದೇಶದಾದ್ಯಂತ ನಿಷೇಧಿಸಬೇಕು. ಈ ಬಗ್ಗೆ ಅವರಿಂದ ಧನಾತ್ಮಕ ಪ್ರತಿಕ್ರಿಯೆ ಬರಲಿದೆ ಎಂದು ನಂಬಿದ್ದೇನೆಂದು ಹೇಳಿದ್ದಾರೆ.

18ನೇ ಶತಮಾನದವರೆಗೂ ಗೋಹತ್ಯೆಯನ್ನು ಯಾರೂ ಮಾಡುತ್ತಿರಲಿಲ್ಲ. ಮೊಘಲರ ದೊರೆ ಔರಂಗಜೇಬ್ ಅವರು ಕೂಡ ಗೋಹತ್ಯಾ ಚಟುವಟಿಕೆಗಳಿಗೆ ನಿಷೇಧ ಹೇರಿದ್ದರು. ಇದೀಗ ಅತೀ ಸೂಕ್ಷ್ಮ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿಯೂ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದರಂತೆ ಇಡೀ ದೇಶದಲ್ಲಿಯೂ ಗೋಹತ್ಯೆ ನಿಷೇಧವಾಗಬೇಕು ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕೇಂಜ್ರ ಸಚಿವ ಶಶಿ ತರೂರ್ ಅವರು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ನನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೆ ಹೋಲಿಕೆ ಮಾಡಿರುವುದರ ಕುರಿತು ಕಿಡಿಕಾರಿರುವ ಅವರು, ಈ ಹೇಳಿಕೆಯು ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಅವಮಾನ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.

Write A Comment