ಗಲ್ಫ್

ಸೌದಿಯಲ್ಲಿ ಮಾಲೀಕನ ಶೋಷಣೆ ಕುರಿತು ಕಣ್ಣೀರಿಟ್ಟ ಭಾರತೀಯ: ನೆರವಿಗೆ ಮೊರೆ

Pinterest LinkedIn Tumblr

abdul sattar

ರಿಯಾದ್: ಸೌದಿ ಅರೇಬಿಯಾದಲ್ಲಿ ಮಾಲೀಕರು ಕಿರುಕುಳ ನೀಡುತ್ತಿದ್ದು, ಸ್ವದೇಶಕ್ಕೆ ಮರಳಲು ಬಿಡುತ್ತಿಲ್ಲ ಎಂದು ಭಾರತೀಯ ಮೂಲದ ಸೌದಿ ಚಾಲಕ ಅಬ್ತುಲ್ ಸತ್ತಾರ್ ಮಕಂದರ್ ಎಂಬುವವರು ತಮ್ಮ ಕಷ್ಟವನ್ನು ಹೇಳಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದುಡಿಮೆಗೆಂದು 2 ವರ್ಷಗಳ ಹಿಂದಷ್ಟೇ ಮಕಂದರ್ ಅವರು ಸೌದಿಗೆ ಹೋಗಿದ್ದು. ಸೌದಿ ಅರೇಬಿಯಾದ ಅಳ್ ಸುರೂರ್ ಯುನೈಟೆಡ್ ಗ್ರೂಪ್ ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇದೀಗ ತಾವು ಮಾಡುತ್ತಿರುವ ಕೆಲಸದಲ್ಲಿ ಮಾಲೀಕರು ಕಿರುಕುಳ ನೀಡುತ್ತಿದ್ದು, ವೇತನ ಸರಿಯಾಗಿ ನೀಡುತ್ತಿಲ್ಲ. ಹಾಗೂ ಊಟ ಮಾಡುವುದಕ್ಕೂ ಹಣವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಕಣ್ಣೀರಿಟ್ಟು ವಿಡಿಯೋವೊಂದರಲ್ಲಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ನಂತರ ಈ ವಿಡಿಯೋವನ್ನು ಭಾರತದಲ್ಲಿರುವ ಸಾಮಾಜಿಕ ಕಾರ್ಯಕರ್ತರಿಗೆ ಕಳುಹಿಸಿಕೊಟ್ಟಿದ್ದಾರೆ.

ಈ ವಿಡಿಯೋವನ್ನು ಮಾರ್ಚ್ 14 ರಂದು ಸಾಮಾಜಿಕ ಹೋರಾಟಗಾರ ಕುಂದನ್ ಶ್ರೀವಾಸ್ತವ ಎಂಬುವವರು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಈ ವಿಡಿಯೋವೀಗ ಮಕಂದರ್ ಅವರಿಗೆ ಕೆಡುಕಾಗಿ ಪರಿಣಮಿಸಿದ್ದು, ವಿಡಿಯೋ ಅಪ್ ಲೋಡ್ ಆದ ನಂತರ ಕ್ರಮ ಕೈಗೊಂಡಿರುವ ಸೌದಿ ಸಂಸ್ಥೆಯು ಮಕಂದರ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಅಲ್ಲದೆ, ತಪ್ಪು ಮಾಹಿತಿ ನೀಡಿದ್ದಾನೆಂದು ಆರೋಪಿ ಮಕಂದರ್ ನನ್ನು ಬಂಧನಕ್ಕೊಳಪಡಿಸಿದೆ ಎಂದು ಶ್ರೀವಾಸ್ತವ ಅವರು ಆರೋಪ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಕುರಿತಂತೆ ಮಾತನಾಡಿರುವ ಸಾಮಾಜಿಕ ಹೋರಾಟಗಾರ ಶ್ರೀವಾಸ್ತವ ಅವರು, ವಿಡಿಯೋ ಕುರಿತಂತೆ ಮಕಂದರ್ ಕೆಲಸ ಮಾಡುತ್ತಿದ್ದ ಕಂಪನಿ ನನ್ನನ್ನು ಸಂಪರ್ಕಿಸಿದ್ದರು. ಅಲ್ಲದೆ, ವಿಡಿಯೋವನ್ನು ತೆಗೆದುಹಾಕಿ, ಕ್ಷಣೆಯಾಚಿಸುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ವಿಡಿಯೋವನ್ನು ತೆಗೆದುಹಾಕಿರುವುದಾಗಿ ಹೇಳಿರುವ ವಾಸ್ತವ ಅವರು, ನಾನು ಮಾನವ ಹಕ್ಕು ಹೋರಾಟಗಾರ, ಪ್ರತಿಯೊಬ್ಬರೂ ನನ್ನು ಕುಟುಂಬದವರು ಎಂದು ನಂಬಿರುವವನು. ಮಾನವೀಯತೆಯ ಆಧಾರದಲ್ಲಿ ವಿಡಿಯೋವನ್ನು ತೆಗೆದು ಹಾಕಿ ಕ್ಷಮೆ ಯಾಚಿಸುತ್ತೇನೆಂದು ಹೇಳಿದ್ದಾರೆ.

ಇದೀಗ ಪ್ರಕರಣ ಕುರಿತ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನೆಲ್ಲಾ ತಳ್ಳಿಹಾಕಿರುವ ಅಲ್ ಸುರಾರ್ ಯುನೈಟೆಡ್ ಗ್ರೂಪ್ ಸಂಸ್ಥೆಯ ಅಧಿಕಾರಿಗಳು, ಕೆಲಸ ಮಾಡಲು ಇಷ್ಟವಿಲ್ಲದೆ ಇದ್ದರೆ ಯಾರೂ ಬೇಕಾದರೂ ರಾಜೀನಾಮೆಯನ್ನು ನೀಡಬಹುದು. ಮಕಂದರ್ ಗೆ ಕಂಪನಿ ಸೂಕ್ತ ರೀತಿಯಲ್ಲಿ ವೇತನ ಪಾವತಿ ಮಾಡುತ್ತಿದೆ. ಎಂದು ಸ್ಪಷ್ಟನೆ ನೀಡಿದೆ.

ನಾನು ಕ್ಷಮೆಯಾಚಿನೆ ಮಾಡಿದ ನಂತರ ಮಕಂದರ್ ಅವರನ್ನು ಸೌದಿ ಬಿಡುಗಡೆ ಮಾಡಿತ್ತು. ಆದರೆ, ಮತ್ತೆ ಅದಾವ ಕಾರಣಕ್ಕೋ ಏನು ಆತನನ್ನು ಮತ್ತೆ ಬಂಧನಕ್ಕೊಳಪಡಿಸಲಾಗಿದೆ. ಮಕಂದರ್’ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಸೌದಿಯಲ್ಲಿ ನೆಲೆಸಿರುವ ಮತ್ತೊಬ್ಬ ಭಾರತೀಯನ್ನನ್ನು ಸಂಪರ್ಕಿಸಿದಾಗ ಮಂಕದರ್ ಆಪಾಯದಲ್ಲಿರುವುದಾಗಿ ಹೇಳಿದನು ಎಂದು ಶ್ರೀವಾಸ್ತವ ಅವರು ಹೇಳಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಸಹಾಯಕ್ಕಾಗಿ ಈಗಾಗಲೇ ವಿದೇಶಾಂಗ ಸಚಿವಾಲಯದ ಮೊರೆ ಹೋಗಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಮಕಂದರ್ ಈಗಾಲೂ ಜೈಲಿನಲ್ಲಿಯೇ ಇದ್ದಾನೆ. ಯಾವುದೇ ಸರ್ಕಾರ ನಮಗೆ ಸಹಾಯ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಸಂಕಷ್ಟದಲ್ಲಿರುವ 35 ವರ್ಷದ ಮಕಂದರ್ ಅವರು ಅವರು ಮೂಲತಃ ಕರ್ನಾಟಕದವರು ಎಂದು ಹೇಳಲಾಗುತ್ತಿದ್ದು, ಇವರಿಗೆ 4 ಮಕ್ಕಳಿದ್ದಾರೆಂದು ತಿಳಿದುಬಂದಿದೆ.

ಗಲ್ಫ್ ದೇಶಗಳಲ್ಲಿ ದಕ್ಷಿಣ ಏಷ್ಯಾ ಕಾರ್ಮಿಕರನ್ನು ಶೋಷಣೆಗೊಳಪಡಿಸಲಾಗುತ್ತಿದೆ ಎಂಬ ಆರೋಪಗಳು ಕೆಲ ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಕಳೆದ ವರ್ಷ ಕೂಡ ಭಾರತೀಯ ಮೂಲದ ಮನೆಗೆಲಸದವಳ ಕೈಯನ್ನು ಕತ್ತರಿಸಿರುವುದಾಗಿ ವರದಿಯಾಗಿತ್ತು. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪತ್ರವೊಂದನ್ನು ಸಲ್ಲಿಸಿತ್ತು. ಇದೀಗ ಮತ್ತೆ ಮಕಂದರ್ ಪ್ರಕರಣ ಬೆಳಕಿಗೆ ಬಂದಿರುವುದು ಹಲವು ಆಕ್ರೋಶಗಳಿಗೆ ಕಾರಣವಾಗಿದೆ.

Write A Comment