ರಾಷ್ಟ್ರೀಯ

ಸೆಲ್ಫಿ ಹುಚ್ಚಿಗೆ ಜೀವವಷ್ಟೇ ಅಲ್ಲ, ಉದ್ಯೋಗಕ್ಕೂ ಬಂತು ಕುತ್ತು..! ಸೆಲ್ಫಿ ಕ್ರೇಜ್ ನಿಂದಾಗಿ ಹಿಂಬಡ್ತಿ ಪಡೆದ ಡಿಆರ್ ಡಿಒ ವಿಜ್ಞಾನಿ

Pinterest LinkedIn Tumblr

Selfie

ನವದೆಹಲಿ: ಅಪಾಯಕಾರಿ ಪರಿಸ್ಥಿತಿ ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಲಿಯಾದವರ ಕುರಿತು ನಾವು ಸಾಕಷ್ಟು ಬಾರಿ ಕೇಳಿದ್ದೇವೆ. ಸಮೀಕ್ಷೆಗಳೂ ಕೂಡ 2015ರಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹೆಚ್ಚು ಮಂದಿ ಬಲಿಯಾಗಿದ್ದರು ಎಂದು ಹೇಳಿದೆ.

ಆದರೆ ಇದೇ ಸೆಲ್ಫಿ ಹುಚ್ಚಿನಿಂದಾಗಿ ದೇಶದ ಪ್ರಮುಖ ರಕ್ಷಣಾ ಸಂಶೋಧನಾ ಸಂಸ್ಥೆ ಡಿಆರ್ ಡಿಒದ ವಿಜ್ಞಾನಿಯೊಬ್ಬರು ಹಿಂಬಡ್ತಿ ಪಡೆದಿದ್ದಾರೆ ಎಂದರೆ ನೀವು ನಂಬಲೇಬೇಕು. ಏಕೆಂದರೆ ದೇಶದ ಹೆಮ್ಮೆಯ ಸಂಸ್ಥೆ ಡಿಆರ್ ಡಿಒದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ವಿಜ್ಞಾನಿಯೊಬ್ಬರು ತಮ್ಮ ಸೆಲ್ಫಿ ಹುಚ್ಚಿನಿಂದಾಗಿ ಹಿಂಬಡ್ತಿ ಪಡೆದಿದ್ದಾರೆ. ಕಚೇರಿಯಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರಿಂದ ಅಸಮಾಧಾನಗೊಂಡ ಹಿರಿಯ ಅಧಿಕಾರಿಗಳು ಅವರಿಗೆ ಹಿಂಬಡ್ತಿ ನೀಡಿದ್ದಾರೆ.

ಡಿಆರ್ ಡಿಒದ ಅಧಿಕಾರಿಯಾಗಿದ್ದ ಸುಶೀಲ್ ಕುಮಾರ್ ಎಂಬ ವಿಜ್ಞಾನಿ ಇತ್ತೀಚೆಗಷ್ಟೇ ಬಡ್ತಿ ಪಡೆದಿದ್ದರು. ದೆಹಲಿರುವ ಪ್ರಧಾನ ಕಚೇರಿಗೆ ಆಗಮಿಸಿದ್ದ ಅವರು ಬಡ್ತಿ ಪಡೆದ ಸಂತಸದಲ್ಲಿ ಕಚೇರಿಯಲ್ಲಿ ಒಂದಿಷ್ಟು ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಸುಶೀಲ್ ಕುಮಾರ್ ಸೆಲ್ಫೆ ತೆಗೆದುಕೊಳ್ಳುತ್ತಿದ್ದ ಕೊಠಡಿಯಲ್ಲಿ ಡಿಆರ್ ಡಿಒದ ಸಾಕಷ್ಟು ರಹಸ್ಯ ಪರಿಕರಗಳಿದ್ದವು. ಆದರೆ ಇದಾವುದರ ಪರಿವೇ ಇಲ್ಲದೇ ಬಡ್ತಿ ಪಡೆದ ಖುಷಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಸಂತಸಲ್ಲಿ ಸುಶೀಲ್ ಕುಮಾರ್ ಒಂದಷ್ಟು ಸೆಲ್ಫಿಗಳನ್ನು ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು.

ಅತ್ತ ಸುಶೀಲ್ ಕುಮಾರ್ ಡಿಆರ್ ಡಿಒ ಕಚೇರಿಯ ಕೊಠಡಿಯ ಕಿಟಕಿ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಇತ್ತ ವೀಕ್ಷಣ ಅಧಿಕಾರಿಗಳು ಅವರ ಕೊಠಡಿಯತ್ತ ಬಂದಿದ್ದರು. ಆಗಲೇ ಸುಶೀಲ್ ಕುಮಾರ್ ಗೆ ಕೊಠಡಿಯಲ್ಲಿ ರಹಸ್ಯ ಪರಿಕರಗಳಿವೆ ಫೋಟೋ ತೆಗೆಯುವಂತಿಲ್ಲ ಎಂದು ತಿಳಿದದ್ದು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ವಿಜ್ಞಾನಿ ಸುಶೀಲ್ ಕುಮಾರ್ ಅವರ ಕ್ರಮವನ್ನು ಖಂಡಿಸಿದ ಅಧಿಕಾರಿಗಳು ಅವರ ಸೆಲ್ ಫೋನ್ ಅನ್ನು ಸೀಜ್ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಿದ್ದಾರೆ. ಅಲ್ಲದೆ ಸುಶೀಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಫೋಟೋಗಳನ್ನು ಕೂಡ ಡಿಲೀಟ್ ಮಾಡಿಸಿದ್ದಾರೆ.

ಅಂತೆಯೇ ಸುಶೀಲ್ ಕುಮಾರ್ ಅವರಿಗೆ ನೀಡಿದ್ದ ಬಡ್ತಿಯನ್ನು ವಾಪಸ್ ಪಡೆದ ಅಧಿಕಾರಿಗಳು ಹಿಂಬಡ್ತಿ ಶಿಕ್ಷೆ ನೀಡಿದ್ದು, ಮತ್ತೆ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಲ್ಯಾಬೋರೇಟರಿ ವಿಭಾಗಕ್ಕೆ ಅವರನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ವಿಜ್ಞಾನಿ ಸುಶೀಲ್ ಕುಮಾರ್ ಡಿಆರ್ ಡಿಒದ ಪ್ರತಿಷ್ಠಿತ ಯೋಜನೆಗಳಾದ ಆಕಾಶ್ ಮತ್ತು ನಾಗ್ ಕ್ಷಿಪಣಿ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಬಡ್ತಿ ಬಳಿಕ ಅವರು ಡಿಆರ್ ಡಿಒದ ಮೆಟೀರಿಯಲ್ ಮ್ಯಾನೇಜ್ ಮೆಂಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಅವರ ಸೆಲ್ಫಿ ಹುಚ್ಚು ಅವರಿಗೆ ಹಿಂಬಡ್ತಿ ನೀಡುವಂತೆ ಮಾಡಿದೆ.

ಇನ್ನು ಸುಶೀಲ್ ಕುಮಾರ್ ಅವರ ನಡೆಯನ್ನು ಖಂಡಿಸಿರುವ ಡಿಆರ್ ಡಿಒ, ಸಂಸ್ಥೆಯ ಮೂಲ ನಿಯಮಾವಳಿಗಳೇ ತಿಳಿಯದ ಅಧಿಕಾರಿಯನ್ನು ಹೇಗೆ ಇಂತಹ ಜವಾಬ್ದಾರಿಯುತ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದೆ. ಒಟ್ಟಾರೆ ಸೆಲ್ಫಿಗೆ ಜೀವ ಮಾತ್ರವಲ್ಲ ಕಷ್ಟಪಟ್ಟು ಗಳಿಸಿದ ಉದ್ಯೋಗ ಕೂಡ ಬಲಿಯಾಗುತ್ತದೆ ಎಂದಾಯಿತು…

Write A Comment