ರಾಷ್ಟ್ರೀಯ

ಸಿನಿಮಾದಿಂದ ಪ್ರೇರಣೆ: ಉದ್ಯಮಿ ಮಗನನ್ನು ಅಪಹರಿಸಿ ಕೊಲೆ ಮಾಡಿದ ಯುವಕರು

Pinterest LinkedIn Tumblr

abhay modani

ಹೈದರಾಬಾದ್: ಸಿನಿಮಾದಿಂದ ಪ್ರೇರಣೆಗೊಂಡಿದ್ದ ಯುವಕರ ಗುಂಪೊಂದು ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆಯೊಂದು ಸಿಕಂದರಾಬಾದ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಅಭಯ್ ಮೊಧಾನಿ (15) ಹತ್ಯೆಗೀಡಾದ ಬಾಲಕನಾಗಿದ್ದು, ಈತನನ್ನು ಶೇಶುಕುಮಾರ್ ಅಳಿಯಾಸ್ ಸಾಯಿರಾಮ್ (22), ಪೊಂಡಾರ ರವಿ (21), ನಂಬೂರಿ ಮೋಹನ್ (23) ಎಂಬ ಯುವಕರು ಮಾರ್ಚ್ 16 ರಂದು ಅಪಹರಣ ಮಾಡಿದ್ದರು.

ಮಾರ್ಚ್ 16 ರಂದು ತಿಂಡಿ ತರಲೆಂದು ಅಭಯ್ ತನ್ನ ದ್ವಿಚಕ್ರದಲ್ಲಿ ಹೊರಗಡೆ ಹೋಗಿದ್ದ. ಶೇಶು ಕುಮಾರ್ ಅಭಯ್ ಗೆ ಪರಿಚಯವಿದ್ದ. ರಸ್ತೆಯಲ್ಲಿ ತನಗೆ ಡ್ರಾಪ್ ಮಾಡುವಂತೆ ತಿಳಿಸಿದ್ದಾನೆ. ಇದರಂತೆ ಶೇಶುನನ್ನು ಆತನ ರೂಮಿಗೆ ಬಿಡಲು ಅಭಯ್ ಹೋಗಿದ್ದಾನೆ. ಈ ವೇಲೆ ಯುವಕರ ಗುಂಪು ಬಾಲಕನನ್ನು ಅಪಹರಿಸಿದ್ದಾರೆ.

ನಂತರ ಬಾಲಕನ ತಂದೆಗೆ ಕರೆ ಮಾಡಿದ ಅವರು ರು.10 ಕೋಟಿ ಹಣ ನೀಡಿದರೆ ಮಗನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡಿರುವ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ಕೆಲ ಹೊತ್ತಿನಲ್ಲೇ ಮತ್ತೆ ಕರೆ ಮಾಡಿರುವ ಯುವಕರು ಮತ್ತೆ ರು.5 ಕೋಟಿ ನೀಡುವಂತೆ ತಿಳಿಸಿ ಸಿಕಂದರಾಬಾದ್ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಾರೆ.

ನಂತರ ಅಭಯ್ ಪೋಷಕರು ಪೊಲೀಸರೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ನಿಲ್ದಾಣದ ಬಳಿ ಪೆಟ್ಟಿಗೆಯೊಂದು ದೊರೆತಿದೆ. ಪೆಟ್ಟಿಗೆಯಲ್ಲಿ ಅಭಯ್ ನ ಮೃತದೇಹ ಪತ್ತೆಯಾಗಿದೆ.

ಇದೀಗ ಅಪಹರಣಕಾರರನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಆರೋಪಿಗಳು ಅಪಹರಣಕ್ಕೂ ಮೊದಲು ಅಪಹರಣ ಕುರಿತಂತೆ ಸಿನಿಮಾವೊಂದನ್ನು ನೋಡಲಾಗಿತ್ತು. ಇದರಂತೆ ಅಭಯ್ ನನ್ನು ಅಪಹರಣ ಮಾಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ತೋರಿಸಿರುವ ಪ್ರಕಾರ ಅಭಯ್ ನನ್ನು ಪ್ಲಾಸ್ಟರ್ ಮೂಲಕ ಬಾಯಿಯನ್ನು ಮುಚ್ಚಲಾಗಿತ್ತು. ಕೈ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ಆದರೆ, ಉಸಿರಾಟ ಸಮಸ್ಯೆಯಿಂದಾಗಿ ಆತ ಸಾವನ್ನಪ್ಪಿದ್ದ. ಭಯಭೀತರಾದ ಯುವಕರು ಆತನನ್ನು ಪೆಟ್ಟಿಗೆಯೊಂದಕ್ಕೆ ಹಾಕಿ ನಿಲ್ದಾಣದಲ್ಲಿ ಬಿಸಾಡಿ ಹೋಗಿದ್ದಾರೆಂದು ಹೇಳಲಾಗುತ್ತಿದೆ.

ಬಂಧನಕ್ಕೊಳಗಾಗಿರುವ ಆರೋಪಿಗಳು 2014ರಿಂದಲೇ ಒಬ್ಬರಿಗೊಬ್ಬರು ಪರಿಚಿತರಾಗಿದ್ದು, ರಾಂಚಿ ಹಾಗೂ ಒಡಿಶಾದಲ್ಲಿ ಜೊತೆಯಾಗಿ ಕೆಲಸಕ್ಕೆ ಹೋಗುತ್ತಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Write A Comment