
ನವದೆಹಲಿ: ರಂಗು ರಂಗಿನ ಹೋಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿರುವಂತೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಅಂತೆಯೇ ರೈಲ್ವೆ ಇಲಾಖೆ ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೆ ಸಿಹಿ ಪದಾರ್ಥ ಒದಗಿಸಲು ಸಿದ್ಧತೆ ನಡೆಸಿದೆ.
ಹೋಳಿ ಹಬ್ಬದ ಸಂದರ್ಭದಲ್ಲಿ ರೈಲುಗಳಲ್ಲಿ ಸಂಚರಿಸುವವರು ಹಬ್ಬಕ್ಕಾಗಿ ರೈಲುಗಳಲ್ಲೇ ಸಿಹಿ ತಿಂಡಿ ಖರೀದಿಸಿ ಮನೆಗಳಿಗೆ ಕೊಂಡೊಯ್ಯಬಹುದಾಗಿದೆ.ಈ ಕುರಿತು ರೈಲ್ವೇ ಆಹಾರ ಇಲಾಖೆ ಸಿಇಒ ಪುಷ್ಪೇಂದ್ರ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹೋಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬಕ್ಕೆ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೋಗಲು ಇಚ್ಛಿಸುತ್ತಾರೆ. ತುಂಬಿರುವ ರೈಲಿನಲ್ಲಿ ಇವರೆಲ್ಲಾ ಪ್ರಯಾಣಿಸಬೇಕಾಗಿದೆ.
ಈ ಸಮಯದಲ್ಲಿ ಮನೆಗೆ ಕೊಡುಗೆ ಮತ್ತು ಸಿಹಿ ತಿಂಡಿಗಳನ್ನು ತೆಗೆದುಕೊಂಡು ಹೋಗೊದನ್ನು ಮರೆಯಬಹುದು. ಅಂತವರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಸಿಹಿ ಮಾರಾಟದ ವ್ಯವಸ್ಥೆ ಮಾಡಿದೆ ಎಂದು ಸಿಂಗ್ ವಿವರಿಸಿದ್ದಾರೆ.
37 ರೈಲ್ವೇ ನಿಲ್ದಾಣಗಳಲ್ಲಿ ಈ ಸೇವೆ
ಈಗಾಗಲೇ ರೈಲ್ವೇ ಇಲಾಖೆ ನವದೆಹಲಿ, ಜಬಲಪುರ, ಆಂಬಾಲಾ ಮತ್ತು ಪುಣೆ ಸೇರಿದಂತೆ 37 ರೈಲ್ವೇ ನಿಲ್ದಾಣಗಳಲ್ಲಿ ಸಿಹಿ ತಿಂಡಿ ವ್ಯಾಪಾರ ಶುರು ಮಾಡಿದೆ.
ಪೋನ್, ಆಪ್ ಮೂಲಕ ಆರ್ಡರ್ ರೈಲ್ವೇ ಇಲಾಖೆಯ ವೆಬ್‌ಸೈಟ್, ಮೊಬೈಲ್ ಆಪ್ ಮತ್ತು ಸರ್ವಿಸ್ ಸಂಖ್ಯೆಗಳ ಮೂಲಕ ಗ್ರಾಹಕರು ಸಿಹಿ ತಿಂಡಿಗಳನ್ನು ಆರ್ಡರ್ ಮಾಡಬಹುದೆಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.