
ನವದೆಹಲಿ: ಸಾಲಬಾಧೆಯಿಂದ ಬಳಲುತ್ತಿರುವ ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ವಿಜಯ ಮಲ್ಯ ಅವರು ಈಗಾಗಲೇ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ ಮಾರನೇ ದಿನವೇ ಮದ್ಯದ ದೊರೆ ಉತ್ತರ ಲಂಡನ್ ಭವ್ಯ ಬಂಗಲೆಯಲ್ಲಿದ್ದಾರೆ ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ.
ದೇಶದ ವಿವಿಧ ಬ್ಯಾಂಕ್ ಗಳಿಂದ ಸುಮಾರು 9000 ಕೋಟಿ ರುಪಾಯಿ ಭಾರೀ ಮೊತ್ತದ ಸಾಲ ಉಳಿಸಿಕೊಂಡು, 275 ಕೋಟಿ ರು. ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರು, ಲಂಡನ್‌ನ ಹೊರವಲಯದ ಟಿವೆನ್ ಎಂಬ ಪ್ರದೇಶದಲ್ಲಿರುವ ಕಂಟ್ರಿ ಹೌಸ್ ಬಂಗಲೆಯಲ್ಲಿರುವುದು ಕಂಡು ಬಂದಿದೆ.
ಲಂಡನ್ ನಲ್ಲಿರುವ ಮಲ್ಯ ಅವರ ಲೇಡಿ ವಾಕ್ ಎಂಬ ಹೆಸರಿನ ಕಂಟ್ರಿ ಹೌಸ್ ಬಂಗಲೆ ಸುಮಾರು 30 ಎಕರೆಯಷ್ಟು ವಿಸ್ತಾರವಾಗಿದ್ದು, ಕ್ವೀನ್ ಹೂ ರಸ್ತೆಯಲ್ಲಿರುವ ಅತೀ ದೊಡ್ಡ ಬಂಗಲೆ ಇದಾಗಿದೆ.
ಬಂಗಲೆಯ ಭದ್ರತಾ ಸಿಬಂದಿಗಳು ಮಾದ್ಯಮಗಳ ಎದುರು ಮಲ್ಯ ಅವರ ಉಪಸ್ಥಿತಿಯ ಬಗ್ಗೆ ವಿವರ ನೀಡಲು ನಿರಾಕರಿಸಿದರು ಎಂದು ವರದಿ ಮಾಡಲಾಗಿದೆ.