ರಾಷ್ಟ್ರೀಯ

4 ಗಂಟೆಯೊಳಗೆ 5 ಕೋಟಿ ದಂಡ ಕಟ್ಟದಿದ್ದರೆ ಅನುಮತಿ ರದ್ದು: ರವಿಶಂಕರ್ ಗುರೂಜಿಗೆ ಎನ್ ಜಿಟಿ ಎಚ್ಚರಿಕೆ

Pinterest LinkedIn Tumblr

ravi shankar

ನವದೆಹಲಿ: ಗುರುವಾರ ಸಂಜೆ 4 ಗಂಟೆಯೊಳಗೆ ಐದು ಕೋಟಿ ರುಪಾಯಿ ದಂಡ ಕಟ್ಟದಿದ್ದರೆ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ‘ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ಆಯೋಜಿಸಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ಕ್ಕೆ ನೀಡಲಾಗಿರುವ ಅನುಮತಿಯನ್ನು ರದ್ದುಗೊಳಿಸಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಎಚ್ಚರಿಸಿದೆ.

ನಿನ್ನೆ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಪರಿಸರ ನಾಶವಾಗುತ್ತದೆ ಎಂದು ಆರೋಪಿಸಿ ಪರಿಸರ ವಾದಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಕರಣ, 5 ಕೋಟಿ ರುಪಾಯಿ ದಂಡ ಸೇರಿದಂತೆ ಕೆಲವು ಷರತ್ತಿನೊಂದಿಗೆ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಸಲು ಹಸಿರು ನಿಶಾನೆ ತೋರಿತ್ತು. ಆದರೆ ದಂಡದ ಮೊತ್ತವನ್ನು ಕಟ್ಟಲು ನಿರಾಕರಿಸಿರುವ ರವಿಶಂಕರ್ ಗುರೂಜಿ ಅವರು, ನ್ಯಾಯಾಧೀಕರಣದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಮತ್ತು ಈ ಸಂಬಂಧ ತಾವು ಜೈಲಿಗೂ ಹೋಗಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಆದರೆ ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ಇಂದು ಸಂಜೆ 4 ಗಂಟೆಯೊಳಗೆ ದಂಡದ ಮೊತ್ತವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಟ್ಟುವಲ್ಲಿ ವಿಫಲವಾದರೆ ಸಾಂಸ್ಕೃತಿಕ ಉತ್ಸವಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವುದಾಗಿ ಎನ್ ಜಿಟಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ಮಾ.11ರಿಂದ 13ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಯಮುನಾ ದಂಡೆಯ ಮೇಲೆ ಬೃಹತ್‌ ವೇದಿಕೆ ಸಿದ್ಧಪಡಿಸಿದ್ದು, ಟೆಂಟ್‌ ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಿದೆ.

Write A Comment