ರಾಷ್ಟ್ರೀಯ

ಶಿವರಾತ್ರಿಯಂದೇ ಮಾರಣಹೋಮ ನಡೆಸಲು ಉಗ್ರರ ಸ್ಕೆಚ್ : ದೇಶದೆಲ್ಲೆಡೆ ಹೈ ಅಲರ್ಟ್

Pinterest LinkedIn Tumblr

terrಅಹಮದಾಬಾದ್/ಪಠಾಣ್‌ಕೋಟ್, ಮಾ.6- ಶಿವರಾತ್ರಿ ಹಬ್ಬದಂದೇ ದೇಶದೆಲ್ಲೆಡೆ ರಕ್ತದೋಕುಳಿ ಹರಿಸಲು ಪಾಕಿಸ್ಥಾನ ಮೂಲದ 10 ಮಂದಿ ಶಸ್ತ್ರಸಜ್ಜಿತ ಉಗ್ರರು ಸಂಚು ರೂಪಿಸಿರುವುದರಿಂದ ದೇಶದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಗುಜರಾತ್, ಪಂಜಾಬ್, ನವದೆಹಲಿ, ಹರ್ಯಾಣ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಪರಿಸ್ಥಿತಿ ನಿಭಾಯಿಸಲು ಅಹಮದಾಬಾದ್ ನಗರಕ್ಕೆ ಎರಡು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯನ್ನು ಕಳುಹಿಸಿಕೊಡಲಾಗಿದೆ. ಜತೆಗೆ ಸೇನಾಪಡೆ, ಅರೆಸೇನಾ ಪಡೆ ಕಟ್ಟೆಚ್ಚರ ವಹಿಸಬೇಕೆಂದು ರಕ್ಷಣಾ ಇಲಾಖೆ ಸೂಚನೆ ಕೊಟ್ಟಿದೆ.

ಪಾಕ್ ಮೂಲದ ಕೆಲವು ಭಯೋತ್ಪಾದನಾ ಸಂಘಟನೆಗೆ ಸೇರಿದ 10ಕ್ಕಿಂತ ಹೆಚ್ಚು ಮಂದಿ ಶಸ್ತ್ರ ಸಜ್ಜಿತ ಉಗ್ರರು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಭಾರತಕ್ಕೆ ಕೆಲ ದಿನಗಳ ಹಿಂದೆಯೇ ಒಳನುಸುಳಿದ್ದಾರೆ ಎಂದು ಪಾಕ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್‌ಖಾನ್ ಜಂಝಾ ಅವರು ಭಾರತದ ಸಹೋದ್ಯೋಗಿ ಅಜಿತ್ ದಾವುಲ್‌ಗೆ ಮಾಹಿತಿ ನೀಡಿದ್ದರು. ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್ ಮತ್ತಿತರ ಸಂಘಟನೆಯ ಆತ್ಮಾಹುತಿ ದಳದ 10 ಉಗ್ರರು ಭಾರತಕ್ಕೆ ಒಳನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಮೂಲಗಳು ಖಚಿತಪಡಿಸಿವೆ.

ಈ ಉಗ್ರರು ಸಮುದ್ರ ಮಾರ್ಗ ಇಲ್ಲವೆ ಎಲ್‌ಒಸಿ ಮೂಲಕ ಗುಜರಾತ್‌ನ ಅಹಮದಾಬಾದ್, ಪಠಾಣ್‌ಕೋಟ್, ನವದೆಹಲಿ ಮತ್ತಿತರ ಪ್ರಮುಖ ನಗರಗಳಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ತಕ್ಷಣವೇ ಭದ್ರತೆ ಹೆಚ್ಚಿಸಬೇಕೆಂದು ನಾಸಿರ್‌ಖಾನ್ ಸಲಹೆ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಈಗಾಗಲೇ ಗುಜರಾತ್‌ನ ಕರಾವಳಿ ತೀರ ಪ್ರದೇಶಗಳು, ನವದೆಹಲಿ, ಮುಂಬೈ, ಪಠಾಣ್‌ಕೋಟ್ ಸೇರಿದಂತೆ ಎಲ್ಲೆಡೆ ಬಿಗಿಭದ್ರತೆ ಕೈಗೊಂಡಿದೆ.

ಪರಿಸ್ಥಿತಿ ನಿಭಾಯಿಸಲು ಎರಡು ಎನ್‌ಎಸ್‌ಜಿ ತಂಡ ರವಾನೆಯಾಗಿದೆ. ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದ್ದೇವೆ ಎಂದು ದಾವೂಲ್ ತಿಳಿಸಿದ್ದಾರೆ. ಹೈ ಅಲರ್ಟ್ ಘೋಷಣೆ: ಕೇಂದ್ರ ಸರ್ಕಾರದ ಸೂಚನೆಯಂತೆ ಗುಜರಾತ್‌ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಗಾಂಧಿ ನಗರ, ಅಹಮದಾಬಾದ್, ಸೂರತ್ ಸೇರಿದಂತೆ ಮತ್ತಿತರ ಕಡೆ ಹದ್ದಿನ ಕಣ್ಣಿಡಲಾಗಿದೆ. ಪೊಲೀಸ್ ಮಹಾನಿರ್ದೇಶಕ ಪಿ.ಸಿ.ಠಾಕೂರ್ ಈಗಾಗಲೇ ಪೊಲೀಸ್ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದು, ಯಾರೊಬ್ಬರೂ ರಜಾ ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದಾರೆ.

ಸೂಕ್ಷ್ಮ-ಅತಿಸೂಕ್ಷ್ಮ ಹಾಗೂ ಮಹಾನಗರಗಳ ಸರ್ಕಾರಿ ಕಚೇರಿಗಳು, ಧಾರ್ಮಿಕ ಕೇಂದ್ರಗಳು, ನ್ಯಾಯಾಲಯದ ಆವರಣ, ಬಸ್, ವಿಮಾನ, ರೈಲು, ಸಾರ್ವಜನಿಕ ಸ್ಥಳಗಳು, ಮಾಲ್‌ಗಳು ಸೇರಿದಂತೆ ಎಲ್ಲೆಡೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಇತ್ತ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲೂ ಭದ್ರತೆ ಹೆಚ್ಚಳ ಮಾಡಲಾಗಿದೆ. ನವದೆಹಲಿಯ ರಾಷ್ಟ್ರಪತಿ ಭವನ, ಸಂಸತ್ ಭವನ, ಪ್ರಧಾನಿ ನಿವಾಸ, ಇಂಡಿಯಾ ಗೇಟ್, ವಿಮಾನ ನಿಲ್ದಾಣ, ಮೆಟ್ರೋ ರೈಲು, ಬಸ್ ನಿಲ್ದಾಣ, ಗಣ್ಯರ ನಿವಾಸ, ರಾಯಭಾರಿ ಕಚೇರಿ ಸೇರಿದಂತೆ ಮತ್ತಿತರ ಕಡೆ ಭದ್ರತೆಯನ್ನು ದುಪ್ಪಟ್ಟು ಮಾಡಲಾಗಿದೆ.

ಗುಜರಾತ್‌ನಿಂದ ಸಂಪರ್ಕ ಕಲ್ಪಿಸುವ ಮುಂಬೈನ ಕರಾವಳಿ ತೀರ ಪ್ರದೇಶಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ ವಶಕ್ಕೆ ತೆಗೆದುಕೊಳ್ಳಬೇಕು. ಪರಿಸ್ಥಿತಿಯನ್ನು ನಿಭಾಯಿಸಲು ನಾವು ಎಲ್ಲ ರೀತಿಯ ಸಿದ್ಧತೆಗಳನ್ನೂ ಕೈಗೊಂಡಿರುವುದಾಗಿ ಸೇನಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಸಭೆ: ಮತ್ತೊಂದೆಡೆ ಉಗ್ರರ ಒಳನುಸುಳುವಿಕೆಯಿಂದ ಆತಂಕಗೊಂಡಿರುವ ಕೇಂದ್ರ ಸರ್ಕಾರ, ಗೃಹ ಮತ್ತು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಭದ್ರತೆ ಹೆಚ್ಚಳ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ಕೊಟ್ಟಿದ್ದಾರೆ.

Write A Comment