ರಾಷ್ಟ್ರೀಯ

ಪ್ರತ್ಯಕ್ಷ ಸಾಕ್ಷಿಗಳಿಲ್ಲದ ಹಿನ್ನಲೆಯಲ್ಲಿ ಎಲ್ ಇಟಿ ಉಗ್ರ ಕರೀಂ ತುಂಡಾ ದೋಷಮುಕ್ತ

Pinterest LinkedIn Tumblr

Abdul Karim Tunda

ನವದೆಹಲಿ: 90ರ ದಶಕದಲ್ಲಿ ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಲಷ್ಕರ್ ಎ ತೊಯ್ಬಾ ಉಗ್ರ ಅಬ್ದುಲ್ ಕರೀಮ್ ತುಂಡಾನನ್ನು ದೆಹಲಿಯ ಸ್ಥಳೀಯ ನ್ಯಾಯಾಲಯ ಶನಿವಾರ ದೋಷಮುಕ್ತಗೊಳಿಸಿದೆ.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ 73 ವರ್ಷದ ಉಗ್ರ ಮುಖಂಡ ತುಂಡಾ ವಿರುದ್ಧ ಪ್ರತ್ಯಕ್ಷ ಸಾಕ್ಷಿಗಳಿಲ್ಲದ ಹಿನ್ನೆಲೆಯಲ್ಲಿ ಆತನ ಬಿಡುಗಡೆ ಮಾಡಿರುವುದಾಗಿ ನ್ಯಾಯಾಲಯ ಹೇಳಿದೆ. ಇದೇ ವೇಳೆ ತುಂಡಾನ ಮಾವ ಮೊಹಮದ್ ಜಕಾರಿಯಾ ಹಾಗೂ ಸಹಚರರಾದ ಅಲ್ಲಾವುದ್ದೀನ್ ಮತ್ತು ಬಷೀರುದ್ದೀನ್‌ರನ್ನೂ ನ್ಯಾಯಾಲಯ ಬಿಡುಗಡೆ ಮಾಡಲಾಗಿದೆ. 26/11 ಮುಂಬೈ ದಾಳಿ ಬಳಿಕ ಪಾಕಿಸ್ತಾನದ ಬಳಿ ಭಾರತ ಹಸ್ತಾಂತರ ಕೋರಿದ್ದ 20 ಉಗ್ರರ ಪೈಕಿ ಕರೀಂ ತುಂಡಾ ಒಬ್ಬನಾಗಿದ್ದಾನೆ. 1996ರಲ್ಲಿ ಆತನ ಬಂಧನಕ್ಕೆ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಜಾರಿಮಾಡಿತ್ತು.

1994ರಲ್ಲಿ ತುಂಡಾನನ್ನು ಭೇಟಿಯಾಗಿದ್ದ ಅಲ್ಲಾವುದ್ದೀನ್ ಮತ್ತು ಬಷೀರುದ್ದೀನ್, ಜಕಾರಿಯಾ ನೆರವಿನಿಂದ ಲಷ್ಕರ್ ಉಗ್ರ ಸಂಘಟನೆ ಸೇರಿದ್ದರು. ಪಾಕಿಸ್ತಾನ ಮತ್ತು ಬಾಂಗ್ಲಾ ಉಗ್ರಗಾಮಿಗಳ ತಂಡ ರಚಿಸಿದ್ದ ತುಂಡಾ, 1998ರಲ್ಲಿ ದೇಶದ ಹಲವೆಡೆ ಸರಣಿ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಎನ್ನಲಾಗಿದೆ. ಸ್ಫೋಟದ ಬಳಿಕ ತಲೆಮರೆಸಿಕೊಂಡಿದ್ದ ಕರೀಂ ತುಂಡಾನನ್ನು 2013 ಆಗಸ್ಟ್ ನಲ್ಲಿ ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲಾಗಿತ್ತು. ತುಂಡಾ ವಿರುದ್ಧ ದಾಖಲಾಗಿದ್ದ 4 ಪ್ರಕರಣಗಳ ಪೈಕಿ ಮೂರರಲ್ಲಿ ಈಗಾಗಲೇ ಆತ ದೋಷಮುಕ್ತನಾಗಿದ್ದಾನೆ.

Write A Comment