ನವದೆಹಲಿ, ಮಾ.3- ಸ್ನ್ಯಾಪ್ಡೀಲ್ ಉದ್ಯೋಗಿ ಯುವತಿಯ ಅಪಹರಣ ಪ್ರಕರಣದ ರೀತಿಯಲ್ಲೇ ಈಗ ಮತ್ತೊಂದು ಅಂಥದ್ದೇ ಘಟನೆ ನಡೆದು ದೆಹಲಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ್ದರೆ, ಪೋಷಕರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ. 29ರ ಹರೆಯದ ಫ್ಯಾಷನ್ ಡಿಸೈನರ್ ಶಿಪ್ರಾ ಕಥಾರಿಯಾ ಮಲ್ಲಿಕ್ ಎಂಬ ತರುಣಿ ನೊಯ್ಡಾದಿಂದ ದೆಹಲಿಯ ಚಾಂದ್ನಿಚೌಕ್ನತ್ತ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ ಆಕೆ ನಿಗೂಢವಾಗಿ ಕಣ್ಮರೆಯಾಗಿದ್ದಾಳೆ. ಯಾರೋ ದುಷ್ಕರ್ಮಿಗಳು ಅಪಹರಿಸಿರಬಹುದೆಂದು ಶಂಕಿಸಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಆಕೆ ಕಡೆಯದಾಗಿ ತನ್ನ ಮೊಬೈಲ್ನಿಂದ ಸಹಾಯವಾಣಿ ಸಂಖ್ಯೆ (100)ಗೆ ಕಾಲ್ ಮಾಡಿದ್ದಾಳೆ. ಆದರೆ, ಆಕೆ ಮಾತನಾಡುವಷ್ಟರಲ್ಲಿ ಕರೆ ಕಟ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕರೆ ಬಂದಿರುವ ಪ್ರದೇಶ ದಕ್ಷಿಣ ದೆಹಲಿಯ ಲಜಪತ್ನಗರ್ ಎಂದು ಗೊತ್ತಾದ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಆಕೆಯ ಕಾರು ರಸ್ತೆ ಬದಿಯಲ್ಲಿ ನಿಂತಿದ್ದು, ಡೋರ್ಗಳು ತೆರೆದ ಸ್ಥಿತಿಯಲ್ಲಿ ನಿಂತಿದೆ. ಕಾರ್ ಕೀ ಕೂಡ ಅದರಲ್ಲೇ ಇದೆ. ಆದರೆ, ಪರ್ಸ್, ಮೊಬೈಲ್ಗಳು ಇಲ್ಲ. ಶಿಪ್ರಾ ನಾಖೆಯಾಗಿ ಸುಮಾರು ಎರಡು ತಾಸುಗಳ ಬಳಿಕ ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ಆಕೆಯ ಪತಿ ಚೇತನ್ ಮಲ್ಲಿಕ್ ಹೇಳಿದ್ದಾರೆ. ಶಿಪ್ರಾ ಯಾವಾಗಲೂ ಅವಳ ಮಾರುತಿ ಸ್ವಿಫ್ಟ್ ಕಾರ್ನಲ್ಲಿ ತಾನು ನಡೆಸುತ್ತಿದ್ದ ಫ್ಯಾಷನ್ ಸಂಸ್ಥೆಗೆ ಅಗತ್ಯ ವಸ್ತುಗಳನ್ನು ತರಲು ದೆಹಲಿ ಚಾಂದ್ನಿಚೌಕ್ಗೆ ಹೋಗಿ ಬರುತ್ತಿದ್ದಳು. ಈಗ ಆ ಕಾರು ಅವರ ಮನೆಯಿಂದ 1ಕಿ.ಮೀ. ದೂರದ 29ನೆ ಸೆಕ್ಟರ್ನಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಇನ್ನೂ ಕೂಡ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ.