ರಾಷ್ಟ್ರೀಯ

ಸೇನಾ ನೇಮಕಾತಿ ಪರೀಕ್ಷೆಗೆ ಅಭ್ಯರ್ಥಿಗಳನ್ನು ಚಡ್ಡಿಯಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಿದ ಪರೀಕ್ಷಕರು

Pinterest LinkedIn Tumblr

dd

ಮುಜಾಫರ್ ನಗರ(ಬಿಹಾರ): ಬಿಹಾರದ ಮುಜಾಫರ್ ನಗರ ಜಿಲ್ಲೆಯಲ್ಲಿ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ಬಟ್ಟೆಯೆಲ್ಲಾ ಕಳಚಿ ಬರೀ ಚಡ್ಡಿಯಲ್ಲಿ ಮೈದಾನದಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಿದ ವಿಲಕ್ಷಣ ಮತ್ತು ಆಘಾತಕಾರಿ ಘಟನೆ ನಡೆದಿದೆ.

ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಯಾಕೆ ಹೀಗೆ ಮಾಡಿದ್ದೀರಿ ಎಂದು ಕೇಳಿದ್ದಕ್ಕೆ, ಅಭ್ಯರ್ಥಿಗಳು ಚೀಟಿಯಲ್ಲಿ ಬರೆದುಕೊಂಡು ಬಂದು ಪ್ಯಾಂಟು-ಶರ್ಟು ಕಿಸೆಯ ಒಳಗೋ ಅಥವಾ ಇನ್ನೆಲ್ಲೆಯೋ ಇಟ್ಟು ನಕಲು ಮಾಡುವ ಸಾಧ್ಯತೆಯಿರುವುದರಿಂದ ಹೀಗೆ ಮಾಡಲಾಯಿತು ಎಂದರಂತೆ ಪರೀಕ್ಷೆಯ ಮೇಲ್ವಿಚಾರಕರು.

ಮೊನ್ನೆ ಭಾನುವಾರ ನಡೆದ ಸೇನೆಯ ಕ್ಲರ್ಕ್ ನೇಮಕಾತಿ ಪರೀಕ್ಷೆಗೆ ಸಾವಿರಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು. ಅಷ್ಟೂ ಅಭ್ಯರ್ಥಿಗಳನ್ನು ಪರೀಕ್ಷೆ ಮಾಡಿ ಒಳಗೆ ಬಿಡಲು ತುಂಬಾ ಸಮಯ ಹಿಡಿಯುತ್ತದೆ ಎಂದು ನಾವು ಹೀಗೆ ಮಾಡಿದೆವು. ಈ ಕ್ರಮ ವಿಚಿತ್ರವೆನಿಸಿದರೂ ನಮಗೆ ಬೇರೆ ದಾರಿಯಿರಲಿಲ್ಲ ಎನ್ನುತ್ತಾರೆ ಪರೀಕ್ಷಕರು.

ಪರೀಕ್ಷೆಯಲ್ಲಿ ನಕಲು ಮಾಡಿ ಬರೆಯುವುದರಲ್ಲಿ ಇಡೀ ದೇಶದಲ್ಲಿ ಬಿಹಾರ ರಾಜ್ಯ ಕುಖ್ಯಾತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಸೇನೆ ಈ ಕ್ರಮಕ್ಕೆ ಮುಂದಾಗಿರಬಹುದು.

ಕಳೆದ ವರ್ಷ ಬಿಹಾರದಲ್ಲಿ ನಡೆದ ಪರೀಕ್ಷೆ ಹಗರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಶಾಲೆಯ ಪರೀಕ್ಷಾ ಕೇಂದ್ರವೊಂದರ ಗೋಡೆಗೆ ಹೊರಗಿನಿಂದ ಒಬ್ಬರ ಮೇಲೊಬ್ಬರು ಹತ್ತಿ ನೋಟ್ಸ್ ಗಳನ್ನು ಒಳಗೆ ಪರೀಕ್ಷೆ ಬರೆಯುತ್ತಿದ್ದವರಿಗೆ ನೀಡಿದ ಸುದ್ದಿ ವೈರಲ್ ಆಗಿತ್ತು. ಅದರ ಫೋಟೋ ಕೂಡ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Write A Comment