ರಾಷ್ಟ್ರೀಯ

ಮುಸ್ಲಿಮರೇ, ಅಂತಿಮ ಯುದ್ಧಕ್ಕೆ ತಯಾರಾಗಿರಿ: ಆಗ್ರಾ ಸಂಘ ಪರಿವಾರ್ ಎಚ್ಚರಿಕೆ

Pinterest LinkedIn Tumblr

vhp_2ಆಗ್ರಾ: ಅಂತಿಮ ಯುದ್ದಕ್ಕಾಗಿ ತಯಾರಾಗಿರಿ ಎಂದು ಸಂಘ ಪರಿವಾರ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿದೆ. ಕಳೆದ ವಾರ ಮುಸ್ಲಿಂ ಯುವಕರಿಂದ ಹತ್ಯೆಗೀಡಾದ ವಿಶ್ವ ಹಿಂದೂ ಪರಿಷತ್ ಮುಖಂಡ ಅರುಣ್ ಮಾಹೋರ್ ಶ್ರದ್ಧಾಂಜಲಿ ಸಭೆಯಲ್ಲಿ ಸಂಘ ಪರಿವಾರ್ ಮುಖಂಡರು ಈ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಸ್ತುತ ಸಭೆಯಲ್ಲಿ ಕೇಂದ್ರ ಸಚಿವರು, ಆಗ್ರಾದ ಬಿಜೆಪಿ ಸಂಸದ ರಾಮ್ ಶಂಕರ್ ಕಥೇರಿಯಾ, ಫತೇಪುರ್ ಸಿಕ್ರಿ ಬಿಜೆಪಿ ಸಂಸದ ಬಾಬುಲಾಲ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಮುಸ್ಲಿಮರು ರಾಕ್ಷಸರು. ಅವರು ರಾವಣನ ವಂಶಜರು. ನಮ್ಮ ಶಕ್ತಿ ಎಷ್ಟಿದೆ ಎಂಬುದನ್ನು ನಾವು ಅವರಿಗೆ ತಿಳಿಸಬೇಕು. ದೇವಸ್ಥಾನಕ್ಕೆ ಹೋಗಿ ಮರಳುವಾಗ ನಮ್ಮ ಗೆಳೆಯನ ಹತ್ಯೆಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಬೇಕು. ಇವರ ವಿರುದ್ಧ ನಾವು ಹೋರಾಡಲೇ ಬೇಕು. ಇಂದು ನಾವು ಅರುಣ್ ಅವರನ್ನು ಕಳೆದುಕೊಂಡಿದ್ದೇವೆ. ನಾಳೆ ಇನ್ನೊಬ್ಬರೂ ಆಗಬಹುದು. ಇನ್ನೊಬ್ಬರನ್ನು ಕಳೆದುಕೊಳ್ಳುವ ಮುನ್ನ ನಾವು ನಮ್ಮ ಶಕ್ತಿ ಏನೆಂದು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕಥೇರಿಯಾ ಸಭೆಯಲ್ಲಿ ಅಬ್ಬರಿಸಿದ್ದಾರೆ.

ಮಾಹೋರ್ ಅವರ ಸಾವಿನ 13ನೇ ದಿನಕ್ಕೆ ಮುಂಚಿತವಾಗಿ ಮುಸ್ಲಿಮರಿಗೆ ಬುದ್ಧಿ ಕಲಿಸಬೇಕು. ಆ ರಾಕ್ಷಸರನ್ನು ನಾಶ ಮಾಡಲೇ ಬೇಕು ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಮಾಥೂರ್ ಅವರ ಹತ್ಯೆಯ ಸೇಡು ತೀರಿಸಿಯೇ ತೀರುವೆವು ಎಂಬ ಉದ್ಘೋಷಗಳೂ ಸಭೆಯಲ್ಲಿ ಕೇಳಿ ಬಂದವು.

ವಿಹಿಂಪ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಅರುಣ್ ಮಾಹೋರ್ ದೇವಾಲಯದಿಂದ ಮರಳುತ್ತಿದ್ದ ವೇಳೆ ಹತ್ಯೆಗೀಡಾಗಿದ್ದರು. ಹತ್ಯೆ ನಡೆಸಿದ್ದು ಮುಸ್ಲಿಂ ಯುವಕರು ಎಂದು ವಿಹಿಂಪ ಆರೋಪಿಸುತ್ತಿದೆ. ಗೋಹತ್ಯೆ ವಿರುದ್ಧ ಹೋರಾಟ ನಡೆಸಿದ್ದೇ ಮಾಹೋರ್ ಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.

Write A Comment