ನವದೆಹಲಿ: ಯುದ್ಧಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತ ಸತತ ಮೂರನೇ ವರ್ಷವೂ ಮೊದಲ ಸ್ಥಾನ ಪಡೆದುಕೊಂಡಿದೆ. ಭಾರತ ಶೇ.14ರಷ್ಟು ಯುದ್ಧ ಸಾಮಗ್ರಿಗಳನ್ನು ಆಮದು ಮಾಡಿಕೊಂಡಿದೆ. ಚೀನಾ ಮತ್ತು ಪಾಕಿಸ್ತಾನದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಭಾರತದ ಆಮದು ಮೂರು ಪಟ್ಟಿನಷ್ಟು ಹೆಚ್ಚಿದೆ. ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್(ಎಸ್ಐಪಿಆರ್ಐ) ಮಾಡಿರುವ ಸಮೀಕ್ಷೆಯಿಂದ ಈ ಅಂಶ ಬಹಿರಂಗವಾಗಿದ್ದು, ಈ ಸಂಸ್ಥೆ ಪ್ರತಿ ಐದು ವರ್ಷಗಳಿಗೊಮ್ಮೆ ವರದಿ ಬಿಡುಗಡೆ ಮಾಡುತ್ತದೆ.
ಭಾರತ 2006-10 ನಡುವಿನ ಯುದ್ಧಸಾಮಗ್ರಿ ಆಮದು ಪ್ರಮಾಣವನ್ನು 2011-15ರ ಖರೀದಿಗೆ ಹೋಲಿಸಿದರೆ ಇದರ ಪ್ರಮಾಣ ಶೇ.90ರಷ್ಟು ಏರಿಕೆಯಾಗಿದೆ. ಭಾರತ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಯುದ್ಧ ಸಾಮಗ್ರಿಗಳನ್ನು ಖರೀದಿಸುತ್ತದೆ.
5 ದೇಶಗಳದ್ದೇ ಸಿಂಹಪಾಲು: ವಿಶ್ವಾದ್ಯಂತ ಒಟ್ಟು ಶೇ. 46ರಷ್ಟು ಯುದ್ಧ ಸಾಮಗ್ರಿಗಳು ಮಾರಾಟವಾಗುತ್ತದೆ. ಕಳೆದ 5 ವರ್ಷಗಳ ಇದರ ಪ್ರಮಾಣ ಶೇ.26ರಷ್ಟು ಏರಿಕೆಯಾಗಿದೆ. ಅದರಲ್ಲೂ ಭಾರತ, ಸೌದಿ ಅರೇಬಿಯಾ, ಚೀನಾ, ಯುಎಇ ಮತ್ತು ಆಸ್ಟ್ರೇಲಿಯಾಗಳೇ ಶೇ. 34ರಷ್ಟು ಯುದ್ಧಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತವೆ.
ರಫ್ತಲ್ಲಿ ಅಮೆರಿಕ ಮುಂದು: ಯುದ್ಧ ಸಾಮಗ್ರಿಗಳನ್ನು ರಫ್ತು ಮಾಡುತ್ತಿರುವ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಶೇ.33ರಷ್ಟು ಪಾಲು ಹೊಂದಿದೆ.