ವೆಲ್ಲೂರು, ಫೆ.24- ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಆರೋಪದ ಮೇಲೆ ಜೀವಶಿಕ್ಷೆಗೆ ಒಳಗಾಗಿರುವ ಆರೋಪಿ ನಳಿನಿ ಶ್ರೀಹರನ್‌ಗೆ 12 ಗಂಟೆಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ನಳಿನಿ ಅವರ ತಂದೆ ನಿನ್ನೆ ಸಂಜೆ ನಿಧನರಾಗಿದ್ದರು. ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ 12 ಗಂಟೆಗಳ ಕಾಲ ಶರತ್ತು ಬದ್ಧ ಪೆರೋಲ್ ಜಾಮೀನು ನೀಡಿತ್ತು.
ಇಲ್ಲಿನ ಮಹಿಳಾ ಜೈಲಿನಿಂದ ಪೊಲೀಸರ ಬಿಗಿಭದ್ರತೆ ನಡುವೆ ಬೆಳಗ್ಗೆ 6.55ಕ್ಕೆ ನಳಿನಿಯನ್ನು ಚೆನ್ನೈಗೆ ಕರೆದೊಯ್ಯಲಾಯಿತು. ನಳಿನಿ ತಂದೆ ಶಂಕರ ನಾರಾಯಣ್ ಕಳೆದ ಸಂಜೆ ನಿಧನರಾಗಿದ್ದರು. ಇಂದು ಅಂತ್ಯ ಸಂಸ್ಕಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.
1998 ಜನವರಿ 28ರಂದು ನಳಿನಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಏಕೆಂದರೆ, ರಾಜೀವ್‌ಗಾಂಧಿಯನ್ನು ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಶಿಕ್ಷೆ ನೀಡಿತ್ತು. ಆದರೆ, ಮಹಿಳೆ ಎಂಬ ಕಾರಣಕ್ಕಾಗಿ ಮಾನವೀಯತೆ ಆಧಾರದ ಮೇಲೆ ಮರಣ ದಂಡನೆ ಶಿಕ್ಷೆಯನ್ನು ತಮಿಳುನಾಡು ಸರ್ಕಾರ 2000 ಏಪ್ರಿಲ್ 24ರಂದು ಜೀವಾವಧಿ ಶಿಕ್ಷೆಗೆ ಪರಿವರ್ತನೆ ಮಾಡಿದೆ. ಈಗಾಗಲೇ ಜೈಲಿನಲ್ಲಿ 14 ವರ್ಷ ಶಿಕ್ಷೆ ಪೂರ್ಣಗೊಳಿಸಿರುವುದರಿಂದ ತಮ್ಮನ್ನು ಬಿಡುಗಡೆ ಮಾಡಬೇಕೆಂದು ನಳಿನಿ ಮದ್ರಾಸ್ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.