ದೆಹಲಿ: ಬಡತನ ಹಿಂಸೆಯ ಕೆಟ್ಟ ರೂಪವಾಗಿದ್ದು, ಇದನ್ನು ನಿರ್ಮೂಲನ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಅವರು ಮಂಗಳವಾರ ಬಹು ನಿರೀಕ್ಷಿತ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಜಂಟಿ ಅಧಿವೇಶನ ಕರೆದು ಮಾತನಾಡಿ, ತಮ್ಮ ಸರ್ಕಾರದ ಆಡಳಿತದ ಕುರಿತು ಪ್ರಸ್ತಾಪಿಸಿದರು. ದೇಶದಲ್ಲಿ ಬಡತನ ಎಂಬುದು ಹಿಂಸೆಯ ಕೆಟ್ಟರೂಪವನ್ನು ಪಡೆದುಕೊಂಡಿದೆ. ಇಂತಹ ಬಡತನವನ್ನು ನಿರ್ಮೂಲನ ಮಾಡಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಗಮನ ಹರಿಸುತ್ತಿದೆ. ಕಡು ಬಡತನ ಜನರಿಗೆ ಸಾಮಾಜಿಕ ಭಧ್ರತೆ ಹಾಗೂ ಆರ್ಥಿಕ ಸೌಲಭ್ಯವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಇಂದು ಗರಿಬೋಂಕಿ ಉನ್ನತಿ (ಬಡಜನರ ಪ್ರಗತಿ), ಕಿಸಾನೋಂಕಿ ಸಮೃದ್ಧಿ (ರೈತರ ಏಳಿಗೆ) ಮತ್ತು ಯುವಕೊಂಕ ರೋಜ್ಗಾರ್ (ಯುವಜನರಿಗೆ ಉದ್ಯೋಗ) ನೀಡುವತ್ತ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ ನಮ್ಮ ಸರ್ಕಾರ 3 ಹೊಸ ಯೋಜನೆಗಳಾದ ಸಾಮಾಜಿಕ ಭದ್ರತೆ, ಪಿಂಚಣಿ ಯೋಜನೆ ಹಾಗೂ 2022ರ ವೇಳೆ ಎಲ್ಲರಿಗೂ ವಸತಿ ನೀಡುವುದನ್ನು ಜಾರಿಗೆ ತರುತ್ತಿದೆ ಎಂದರು.