ದೆಹಲಿ: ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ದಾಖಲಾಗಿರುವ ರಾಷ್ಟ್ರದ್ರೋಹ ಪ್ರಕರಣವನ್ನು ಹಿಂಪಡೆಯುವುದು ಹಾಗೂ ಆತನನ್ನು ಬಿಡುಗಡೆಗೊಳಿಸುವುದು ನಮ್ಮ ಕೈಯಲ್ಲಿಲ್ಲ ಎಂದು ಜೆಎನ್ ಯು ಇಂದು ಹೇಳಿದೆ.
ಪ್ರಕರಣ ಸಂಬಂಧ ಮಾತನಾಡಿರುವ ಜೆಎನ್ ಯು ರಿಜಿಸ್ಟ್ರಾರ್ ಭುಪಿಂದರ್ ಝುತ್ಶಿ, ನಾವು ಕನ್ಹಯ್ಯ ಕುಮಾರ್ ನನ್ನು ಬಂಧಿಸಿಲ್ಲ. ಮಾತ್ರವಲ್ಲದೇ ಯಾರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲಿಸಿಲ್ಲ. ಪ್ರಕರಣ ಸಂಬಂಧ ಕ್ರಮ ಕೈಗೊಂಡಿರುವುದು ಪೊಲೀಸರು ಹಾಗೂ ನ್ಯಾಯಾಲಯ ಎಂದು ಹೇಳಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಸೋಮವಾರವಷ್ಟೇ ಕನ್ಹಯ್ಯ ಹಾಗೂ ವಿವಿಯ ಐವರ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣ ಸಂಬಂಧ ಹಲವಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ವಿವಿ ಉಪ ಕುಲಪತಿ ಜಗದೀಶ್ ಕುಮಾರ್ ಅವರು ವಿದ್ಯಾರ್ಥಿಗಳ ಪರವಾಗಿ ನಿಂತು ಪ್ರಕರಣವನ್ನು ಹಿಂಪಡೆದು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು.
ಇದರಂತೆ ಮಾತನಾಡಿರುವ ಭುಪಿಂದರ್ ಅವರು, ವಿದ್ಯಾರ್ಥಿಗಳ ಬಂಧನ ಕುರಿತಂತೆ ಪೊಲೀಸರು ಈ ವರೆಗೂ ನಮ್ಮನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ನಮ್ಮ ಬಳಿ ಅನುಮತಿಯನ್ನು ಕೇಳಿಲ್ಲ. ನಾವು ಕೂಡ ಪೊಲೀಸರ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.