ಕೊಯಂಬತ್ತೂರ್: ಅಶ್ಲೀಲ ಹಾಡಿನಿಂದ ವಿವಾದಕ್ಕೀಡಾಗಿ ತಲೆಮರೆಸಿಕೊಂಡಿದ್ದ ತಮಿಳು ಖ್ಯಾತ ನಟ ಸಿಂಬು ಅಲಿಯಾಸ್ ಸಿಳಬರಸನ್ ಅವರು ಸೋಮವಾರ ಕಡೆಗೂ ಪೊಲೀಸ್ ರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸಿಂಬು ಅವರು ಹಾಡಿದ ಲವ್ ಸಾಂಗ್‌ನಲ್ಲಿ ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆಂದು ಆರೋಪಿಸಿ ಚೆನ್ನೈ, ಸೇಲಂ ಸೇರಿದಂತೆ ಅನೇಕ ಕಡೆಗಳಲ್ಲಿ ಮಹಿಳಾ ಸಂಘಟನೆಗಳು ಸಿಂಬು ಹಾಗೂ ಸಂಗೀತಗಾರ ಅನಿರುಧ್ ಅವರ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣ ಸಂಬಂಧ ನಟ ಸಿಂಬು ಅವರು ಇಂದು ಕೊಯಂಬತ್ತೂರಿ ಕಾಟೂರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು. ಪೊಲೀಸರು ಸುಮಾರು ಒಂದು ಗಂಟೆಗಳ ಕಾಲ ನಟನ ವಿಚಾರಣೆ ನಡೆಸಿದರು ಎನ್ನಲಾಗಿದೆ.
ಪೊಲೀಸ್ ಬಂಧನ ಭೀತಿಯಲ್ಲಿದ್ದ ಸಿಂಬು ತಲೆ ಮರೆಸಿಕೊಂಡಿದ್ದರು. ಬಳಿಕ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನಟನಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ವಿಚಾರಣೆಗೆ ಹಾಜರಾಗಿದ್ದರು.