ಅಲಿಗಢ್: ಜನಗಣ ಮನವನ್ನು ರಾಷ್ಟ್ರಗೀತೆ ಮಾಡುವ ಬದಲು ವಂದೇ ಮಾತರಂ ಅಥವಾ ಝಂಡಾ ಊಂಚಾ ರಹೇ ಹಮಾರ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕಿತ್ತು. ಯಾಕೆಂದರೆ ರಬೀಂದ್ರನಾಥ್ ಟಾಗೋರ್ ಅವರು ಬ್ರಿಟಿಷ್ ಸರ್ಕಾರವನ್ನು ಹೊಗಳಿ ಬರೆದ ಗೀತೆಯಾಗಿದೆ ಜನಗಣಮನ ಎಂದು ಪ್ರಖ್ಯಾತ ಹಿಂದಿ ಕವಿ ಗೋಪಾಲ್ ದಾಸ್ ‘ನೀರಜ್’ ಹೇಳಿದ್ದಾರೆ.
ನಾನು ನನ್ನ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್‌ನಲ್ಲಿ ಕಾವ್ಯ ರಚನೆ ಮಾಡಿದ್ದೆ. ಆದರೆ ಹರಿವಂಶ್ ರಾಯ್ ಬಚ್ಚನ್ ಅವರು ನನ್ನಲ್ಲಿ ಹಿಂದಿ ಕವಿತೆಯತ್ತ ಹೆಚ್ಚು ಗಮನ ನೀಡುವಂತೆ ಹೇಳಿದರು. ಕವಿತೆ ಮಾತೃಭಾಷೆಯಲ್ಲಿರಬೇಕು ಎಂದು ಬಚ್ಚನ್ ಅವರು ನನ್ನಲ್ಲಿ ಹೇಳಿದ್ದರು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ನೀರಜ್ ಹೇಳಿದ್ದಾರೆ.
1940ರ ಹೊತ್ತಿನಲ್ಲಿ ಹರಿವಂಶರಾಯ್ ಅವರ ಜತೆಗಿನ ಒಡನಾಟವನ್ನು ನೀರಜ್ ಇಲ್ಲಿ ಸ್ಮರಿಸಿಕೊಂಡಿದ್ದಾರೆ.
ಬರೆಯುವ ಭಾಷೆಯನ್ನಾಧರಿಸಿ ಸಾಹಿತ್ಯದಲ್ಲಿ ಭೇದಭಾವಗಳುಂಟಾಗಿವೆಯೇ? ಎಂದು ಅವರಲ್ಲಿ ಕೇಳಿದಾಗ, ಈಗ ಇಂಗ್ಲಿಷ್ ಭಾಷೆಯಲ್ಲಿ ಬರೆಯುವವರನ್ನು ದೊಡ್ಡವರು ಮತ್ತು ಹಿಂದಿಯಲ್ಲಿ ಬರೆಯುವವರು ಚಿಕ್ಕವರು ಎಂದು ನೋಡುವ ಟ್ರೆಂಡ್ ಇದೆ. ನಾವೆಲ್ಲರೂ ಬ್ರಿಟಿಷರು ಭಾರತದಲ್ಲಿ ಅಧಿಕಾರದಲ್ಲಿದ್ದಾಗ ಗುಲಾಮರಾಗಿದ್ದೆವು. ನಮ್ಮ ರಾಷ್ಟ್ರಗೀತೆಯೂ ಬ್ರಿಟಿಷರ ಕಾಲದಲ್ಲಿ ರಚಿತವಾಗಿದ್ದಾಗಿದೆ. ಬ್ರಿಟಿಷರು ನಮ್ಮನ್ನು ಬಿಟ್ಟು ಹೋದರೂ ನಾವು ಇನ್ನೂ ಅವರು (ಇಂಗ್ಲಿಷ್)ನ ಗುಲಾಮರಾಗಿದ್ದೇವೆ.
ಬ್ರಿಟನ್‌ನ ಜಾರ್ಜ್ ಗ ಅಧಿಕಾರಾವಧಿಯಲ್ಲಿ 1911ರಲ್ಲಿ ಟಾಗೋರ್ ರಾಷ್ಟ್ರಗೀತೆಯನ್ನು ರಚಿಸಿದ್ದರು.
ರಾಷ್ಟ್ರಗೀತೆಯಲ್ಲಿ ಏನಾದರೂ ಬದಲಾವಣೆ ಮಾಡಬೇಕಿದೆ ಎಂದು ನಿಮಗೆ ಅನಿಸುತ್ತಿದೆಯೇ? ಎಂಬ ಪ್ರಶ್ನೆಗೆ ನೀರಜ್ ಅವರು, ಜನಗಣಮನ ಈಗಾಗಲೇ ರಾಷ್ಟ್ರಗೀತೆಯಾಗಿದೆ. ಇನ್ನೇನು ಮಾಡುವುದಕ್ಕೆ ಸಾಧ್ಯ? ನಾವ್ಯಾಕೆ ವಂದೇ ಮಾತರಂನ್ನು ಪರಿಗಣಿಸಿಲ್ಲ? ವಂದೇ ಮಾತರಂಗಾಗಿ ಹಿಂದೂ ಮುಸ್ಲಿಂ ಸೇರಿದಂತೆ ಹಲವಾರು ಮಂದಿ ಹುತಾತ್ಮರಾಗಿದ್ದರು. ಜನಗಣ ಮನ ಅಧಿನಾಯಕ ಎಂದು ಹೇಳುತ್ತೇವೆ. ಇಲ್ಲಿ ಅಧಿನಾಯಕ ಎಂಬುದು ಸರ್ವಾಧಿಕಾರಿಯನ್ನು ಹೊಗಳಿ ಬರೆದಿರುವುದಾಗಿದೆ. ಜಯಹೇ ಭಾರತ್ ಭಾಗ್ಯ ವಿಧಾತ ಎಂಬ ಸಾಲಿನಲ್ಲಿ ನೀನೇ ಭಾರತದ ವಿಧಿ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ಪಂಜಾಬ್ ಸಿಂಧ್ ಗುಜರಾತ್ ಮರಾಠಾ…,ಈಗ ಸಿಂಧ್ ಎಲ್ಲಿದೆ?
ಇದಕ್ಕಿಂತ ಝಂಡಾ ಊಂಚಾ ರಹೇ ಹಮಾರಾ ಒಳ್ಳೆಯ ಹಾಡು. ನಮ್ಮ ರಾಷ್ಟ್ರಧ್ವಜವನ್ನು ಗೌರವಿಸಲು ಇದಕ್ಕಿಂತ ಉತ್ತಮ ಹಾಡು ಯಾವುದಿದೆ? ಜನಗಣಮನ ರಾಷ್ಟ್ರಗೀತೆ ಆಗಿರುವಾಗ ಇನ್ನೇನು ಮಾಡುವುದಕ್ಕೆ ಸಾಧ್ಯ?
ವಂದೇ ಮಾತರಂ ಅನ್ನು ರಾಷ್ಟ್ರಗೀತೆ ಮಾಡಬೇಕಿತ್ತು ಅಂತೀರಿ, ಇದು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಸಂಬಂಧಿಸಿದ್ದು ಅನ್ನುವ ನಿಲುವಿನಿಂದ ಹೀಗೆ ಹೇಳುತ್ತಿದ್ದೀರಾ?
ಇದು ನನ್ನ ಸೈದ್ಧಾಂತಿಕ ನಿಲುವು. ಯಾರೊಬ್ಬರು ನನ್ನಲ್ಲಿ ಹಾಗೆ ಹೇಳಿ, ಹೀಗೆ ಹೇಳಿ ಅಂದಿಲ್ಲ. ನಾನು ಮಾನವೀಯತೆ ಇರುವ ಕವಿ. ನನ್ನ ಕವನಗಳನ್ನು ಓದಿದರೆ ನಿಮಗೆ ಅದು ಅರ್ಥವಾಗುತ್ತದೆ. ಸಂಘ, ಬಿಜೆಪಿ ಅಥವಾ ಇನ್ಯಾವುದೇ ಆಗಿರಲಿ…ನನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ. ನಾನು ಈ ವಿಷಯವನ್ನು ಹೇಳಿದೆ ಅಷ್ಟೇ, ರಾಜಕೀಯವೆಂಬುದು ಮೂರನೇ ದರ್ಜೆಯ ಕೆಲಸ.
ನಾನು ಕಳಪೆ ಎಂದೆನಿಸುವುದನ್ನು ಯಾವತ್ತೂ ಬರೆದಿಲ್ಲ. ನಾನು ಈಗಲೂ ಬರೆಯುತ್ತೇನೆ. ನಾನು ಹೇಳುವುದು ಸರಿ ಎಂಬ ನಿಲುವು ಸ್ವೀಕರಿಸಿದವರೇ ನನ್ನನ್ನು ಕಾರ್ಯಕ್ರಮಗಳಿಗೆ ಕರೆಯುತ್ತಾರೆ.
ಕವನ ಮಾನವೀಯತೆಯನ್ನು ಮೆರೆಯಬೇಕು. ಈ ವಿಶ್ವದಲ್ಲಿ ಮಾನವೀಯತೆಗಿಂತ ದೊಡ್ಡ ಸತ್ಯ ಬೇರೊಂದಿಲ್ಲ ಎಂದು ಪದ್ಮಭೂಷಣ ಪ್ರಶಸ್ತಿ ವಿಜೇತ 92 ರ ಹರೆಯದ ನೀರಜ್ ಹೇಳಿದ್ದಾರೆ.