ರಾಷ್ಟ್ರೀಯ

ನಾನು ಉಮರ್ ಖಾಲಿದ್; ನಾನು ಉಗ್ರನಲ್ಲ

Pinterest LinkedIn Tumblr

umar

ನವದೆಹಲಿ: ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿ ತಲೆ ಮರೆಸಿಕೊಂಡಿದ್ದ 5 ವಿದ್ಯಾರ್ಥಿಗಳು ಭಾನುವಾರ ರಾತ್ರಿ ವಿವಿ ಕ್ಯಾಂಪಸ್‌ಗೆ ವಾಪಸ್ ಆಗಿದ್ದಾರೆ. ಜೆಎನ್‌ಯುನಲ್ಲಿ ನಡೆದ ಘಟನೆಯಲ್ಲಿ ಮುಖ್ಯವಾಗಿ ಉಮರ್ ಖಾಲಿದ್ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಹೆಸರು ವಿವಾದದೊಂದಿಗೆ ತಳುಕು ಹಾಕಿಕೊಂಡಿತ್ತು. ಉಮರ್ ಖಾಲಿದ್ ತಲೆಮರೆಸಿಕೊಂಡು ಸುದ್ದಿಯಾಗಿದ್ದರೆ, ಕನಯ್ಯಾ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.

ಉಮರ್ ಖಾಲಿದ್, ಅನಂತ್ ಪ್ರಕಾಶ್ ನಾರಾಯಣ್, ಅಶುತೋಷ್ ಕುಮಾರ್, ರಾಮ ನಾಗ ಮತ್ತು ಅನಿರ್ಬನ್ ಭಟ್ಟಾಚಾರ್ಯ ಎಂಬೀ ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದರು. ಭಾನುವಾರ ವಿವಿಯ ಅಡ್ಮಿನಿಸ್ಟ್ರೇಷನ್ ಬ್ಲಾಕ್ ಬಳಿ ಸೇರಿದ ವಿದ್ಯಾರ್ಥಿಗಳ ಗುಂಪು ಈ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಘೋಷಣೆ ಕೂಗಿ ಕ್ಯಾಂಪಸ್‌ಗೆ ಬರ ಮಾಡಿಕೊಂಡಿತ್ತು.

ಕ್ಯಾಂಪಸ್‌ಗೆ ಮರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖಾಲಿದ್, ಕ್ಯಾಂಪಸ್‌ನಲ್ಲಿ ಕಳೆದ 7 ವರ್ಷಗಳಿಂದ ಇದ್ದೀನಿ. ಇಲ್ಲಿಯವರೆಗೆ ನಾನೊಬ್ಬ ಮುಸ್ಲಿಂ ಎಂಬ ಭಾವನೆ ನನ್ನಲ್ಲಿ ಬಂದಿರಲಿಲ್ಲ. ಆದರೆ ಕಳೆದ 10 ದಿನಗಳಲ್ಲಿ ನಾನೊಬ್ಬ ಮುಸ್ಲಿಂ ಆಗಿದ್ದೆ ಎಂಬ ಅನುಭವ ನನಗಾಗಿದೆ. ನಾನು ಉಮರ್ ಖಾಲಿದ್, ನಾನೊಬ್ಬ ಉಗ್ರನಲ್ಲ ಎಂದು ಹೇಳಿದ ಖಾಲಿದ್, ತನ್ನನ್ನು ಉಗ್ರನೆಂದು ಬಿಂಬಿಸಿದ ಮಾಧ್ಯಮಗಳನ್ನು ಖಂಡಿಸಿದ್ದಾರೆ.

ಫೆ. 9ರಂದು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪೊಲೀಸರು ವಿಶ್ವ ವಿದ್ಯಾನಿಲಯದ ಮೇಲೆ ದಾಳಿ ಮಾಡಿಲ್ಲ, ಬದಲಾಗಿ ಸರ್ಕಾರಕ್ಕೆ ನಮ್ಮ ಮೇಲೆ ದಾಳಿ ಮಾಡಲು ಒಂದು ನೆಪ ಬೇಕಿತ್ತು ಎಂದು ಖಾಲಿದ್ ಹೇಳಿದ್ದಾರೆ.
ಕನಯ್ಯಾ ಕುಮಾರ್ ನ್ನು ಬಂಧಮುಕ್ತಗೊಳಿಸಿ, ದೇಶದ್ರೋಹಿ ಆರೋಪ ಹಿಂತೆಗೆಯಿರಿ, ಜೆಎನ್‌ಯು ಚಿರಾಯುವಾಗಲಿ ಎಂಬ ಘೋಷಣೆಗಳು ಕ್ಯಾಂಪಸ್‌ನಲ್ಲಿ ಕೇಳಿಬರುತ್ತಿದ್ದವು.

ಮಾಧ್ಯಮಗಳು ನನ್ನ ಬಗ್ಗೆ ಸಿಕ್ಕಾಪಟ್ಟೆ ಬರೆದಿವೆ. ಈ ಹೊತ್ತಲ್ಲಿ ನನ್ನ ಕುಟುಂಬ ಇದನ್ನೆಲ್ಲಾ ಹೇಗೆ ಸಹಿಸಿಕೊಂಡು ಹೋಗುತ್ತಿದೆ ಎಂಬುದು ನನಗೊಬ್ಬನಿಗೇ ಗೊತ್ತು.
ಕಾರ್ಯಕ್ರಮಕ್ಕೆ ಮುನ್ನ ಗಲ್ಫ್ ಅಥವಾ ಕಾಶ್ಮೀರಕ್ಕೆ ನಾನು 800 ಕರೆ ಮಾಡಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ ಖಾಲಿದ್.

ನಮ್ಮೆಲ್ಲಾ ಗೆಳೆಯರು ವಾಪಸ್ ಬಂದಿರುವುದು ಖುಷಿಯ ವಿಚಾರ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಶೋರಾ ಹೇಳಿದ್ದಾರೆ,

ಕ್ಯಾಂಪಸ್‌ಗೆ ಪೊಲೀಸರು ಬಂದಿದ್ದರೆ ವಿದ್ಯಾರ್ಥಿಗಳು ಶರಣಾಗುತ್ತಿದ್ದರು. ಇಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ರೆಕಾರ್ಡ್ ಮಾಡುವಂತೆ ನಾವು ಮಾಧ್ಯಮದವರಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ, ಅದನ್ನು ತಿರುಚಬೇಡಿ ಎಂಬುದೂ ನಮ್ಮ ವಿನಂತಿ ಎಂದು ಶೋರಾ ಹೇಳಿದ್ದಾರೆ.

ಏತನ್ಮಧ್ಯೆ, ಕ್ಯಾಂಪಸ್‌ನೊಳಗೆ ಪೊಲೀಸರು ಮಫ್ತಿನಲ್ಲಿ ತಿರುಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Write A Comment