ನವದೆಹಲಿ: ದೇಶದ್ರೋಹದ ವಿವಾದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಮರ್ ಖಲೀದ್ ಹಾಗೂ ಇತರ ನಾಲ್ವರು ವಿದ್ಯಾರ್ಥಿಗಳು ನಿನ್ನೆ ವಾಪಾಸಾಗಿದ್ದಾರೆ. ಕಾಲೇಜು ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವ ಕನಯ್ಯಾ ಕುಮಾರ್ ಪರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾವು ಪೊಲೀಸರಿಗೆ ಹೆದರಿ ಇಷ್ಟು ದಿನ ತಲೆಮರೆಸಿಕೊಂಡಿದ್ದಲ್ಲ ಬದಲಾಗಿ ಸಾಮೂಹಿಕವಾಗಿ ಹತ್ಯೆ ಮಾಡಬಹುದು ಎಂದು ಭೀತಿಗೊಂಡು ತಪ್ಪಿಸಿಕೊಂಡಿದ್ದೆವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ತಾವು ಯಾವುದೇ ತಪ್ಪು ಮಾಡಿಲ್ಲ, ನಕಲಿ ವಿಡಿಯೋ ಬಳಸಿ ನಮ್ಮನ್ನು ವಿನಾಕಾರಣ ಆರೋಪಿಗಳನ್ನಾಗಿ ಮಾಡಲಾಗಿದೆ. ನಾವಾಗಿಯೇ ಪೊಲೀಸರಿಗೆ ಶರಣಾಗುವುದಿಲ್ಲ. ಅವರು ನಮ್ಮನ್ನು ಬಂಧಿಸಬಹುದು ಎಂದು ಹೇಳಿದರು.
ಸಂಸತ್ತು ದಾಳಿ ರೂವಾರಿ ಉಗ್ರ ಅಫ್ಜಲ್ ಗುರು ಪರ ವಹಿಸಿ ಮತ್ತು ದೇಶ ವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ಫೆಬ್ರವರಿ 12ರಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನಯ್ಯಾ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು. ನಂತರ ಜೆಎನ್ ಯು ಕ್ಯಾಂಪಸ್ಸಿನಿಂದ ಐವರು ವಿದ್ಯಾರ್ಥಿಗಳಾದ ಉಮರ್ ಖಲೀದ್, ಅನಿರ್ಬನ್ ಭಟ್ಟಾಚಾರ್ಯ, ರಮಾ ನಾಗ, ಆಶುತೋಷ್ ಕುಮಾರ್ ಮತ್ತು ಅನಂತ್ ಪ್ರಕಾಶ್ ನಾಪತ್ತೆಯಾಗಿದ್ದರು.
” ಪೊಲೀಸರ ವಿಚಾರಣೆಗೆ ಸಹಕರಿಸಲು ನಾವು ವಾಪಾಸಾಗಿದ್ದೇವೆ. ನಮಗೆ ವಿದ್ಯಾರ್ಥಿಗಳಿಂದ ಮತ್ತು ದೇಶ ಹಾಗೂ ವಿದೇಶಗಳ ಹಲವು ಭಾಗಗಳಿಂದ ಜನರು ಬೆಂಬಲ ನೀಡುತ್ತಿರುವುದನ್ನು ನೋಡಿ ನಮಗೆ ವಾಪಾಸಾಗಲು ಧೈರ್ಯ, ಉತ್ಸಾಹ ಬಂತು. ನಾವು ನಾಲ್ಕು ಜನ ಕೂಡ ಇಲ್ಲೇ ಸುತ್ತಮುತ್ತ ಇದ್ದೆವು. ಗುಂಪು ಗಲಭೆ, ಘರ್ಷಣೆಯ ವಾತಾವರಣವಿದ್ದುದರಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಮತ್ತೊಬ್ಬ ಉಮರ್ ಖಲೀದ್ ನ ಜೊತೆ ನಾವು ಸಂಪರ್ಕದಲ್ಲಿರಲಿಲ್ಲ. ಅವನ ಜೊತೆ ನಾವು ಫೆಬ್ರವರಿ 9ರಂದು ಕಡೆಯ ಸಲ ಮಾತನಾಡಿದ್ದು ಎಂದು ವಿದ್ಯಾರ್ಥಿ ಆಶುತೋಷ್ ತಿಳಿಸಿದ್ದಾನೆ.
”ನಾವು ದೆಹಲಿಯಲ್ಲಿಯೇ ಇದ್ದೆವು. ಭಾನುವಾರ ಹಿಂತಿರುಗುತ್ತೇವೆ ಎನ್ನುವ ನಿರ್ಧಾರವನ್ನು ವೈಯಕ್ತಿಕವಾಗಿಯೇ ತೆಗೆದುಕೊಂಡೆವು. ನಾವು ಯಾವುದೇ ತಪ್ಪು ಮಾಡಿಲ್ಲ. ವಿಡಿಯೋವನ್ನು ನಕಲಿ ಮಾಡಿ ನಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನಾವಿನ್ನು ಎಲ್ಲಿಗೂ ಹೋಗುವುದಿಲ್ಲ. ವಿಶ್ವವಿದ್ಯಾಲಯದ ಪರ ಹೋರಾಟದಲ್ಲಿ ತೊಡಗುತ್ತೇವೆ ಎಂದು ತಿಳಿಸಿದ್ದಾರೆ.
ಐವರು ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ಸಿಗೆ ವಾಪಾಸಾಗಿದ್ದಾರೆ ಎಂಬ ವಿಷಯ ತಿಳಿದು ನಾವೇ ಅಲ್ಲಿಗೆ ಹೋದೆವು. ಅವರಾಗಿ ಶರಣಾಗಿಲ್ಲ. ಇದೀಗ ನಮ್ಮ ತಂಡ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಹೊರಗೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕನಯ್ಯ ಕುಮಾರ್ ನನ್ನು ಬಿಡುಗಡೆ ಮಾಡುವಂತೆ ವಿದ್ಯಾಲಯದಲ್ಲಿ ಪ್ರತಿಭಟನೆ ಮುಂದುವರಿದಿದೆ.