ನವದೆಹಲಿ: ತೀವ್ರ ಹಿಂಸಾತ್ಮಕ ಸ್ವರೂಪ ಪಡೆದಿರುವ ಹರಿಯಾಣದ ಜಾಟ್ ಸಮುದಾಯದ ಮೀಸಲಾತಿ ಚಳವಳಿಯ ಪರಿಣಾಮವಾಗಿ ರಾಜಧಾನಿ ದೆಹಲಿಯ ನೀರು ಸರಬರಾಜಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರವು ಹರಿಯಾಣ ಸರ್ಕಾರಕ್ಕೆ ಸೂಚನೆ ನೀಡಿದೆ.
ದೆಹಲಿಯಲ್ಲಿ ನೀರಿನ ತೀವ್ರ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ದೆಹಲಿ ಸರ್ಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುವುದರ ಜೊತೆಗೆ ನೀರು ಸರಬರಾಜು ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿತ್ತು.
ದೆಹಲಿಯ ನೀರು ಸರಬರಾಜಿಗೆ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಿ ಎಂದು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಮಂಡಳಿ ಹರಿಯಾಣ ಸರ್ಕಾರಕ್ಕೆ ಭಾನುವಾರ ಮುಂಜಾನೆ ಸೂಚಿಸಿದೆ. ಹರಿಯಾಣದ ಮುನಾಕ್ ನಾಲೆಯ ಚಟುವಟಿಕೆಗಳು ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿದ್ದು, ದೆಹಲಿಯ ಶೇಕಡಾ 60ರಷ್ಟು ಭಾಗಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ದೆಹಲಿಯ 7 ನೀರು ಸಂಸ್ಕರಣಾ ಘಟಕಗಳು ಈಗಾಗಲೇ ಬಾಗಿಲೆಳೆದುಕೊಂಡಿವೆ.