ಅಲಹಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಇತ್ತೀಚಿನ ಮಾತುಗಳು ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಸಂತೋಷಪಡಿಸುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ, ದೇಶಭಕ್ತಿ ಎಂಬುದು ನನ್ನ ರಕ್ತದಲ್ಲೇ ಇದೆ, ಅದಕ್ಕಾಗಿ ನಾನು ಬಿಜೆಪಿ ಮತ್ತು ಆರ್ ಎಸ್ ಎಸ್ ನಿಂದ ಸರ್ಟಿಫಿಕೇಟ್ ಪಡೆಯಬೇಕಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಗಿರಿರಾಜ್ ಸಿಂಗ್, ಬಿಜೆಪಿ ದೇಶಭಕ್ತಿ ಸರ್ಟಿಫಿಕೇಟ್ ಕೊಡುವ ಬ್ಯುಸಿನೆಸ್ ಮಾಡುತ್ತಿಲ್ಲ. ಆದರೆ, ರಾಹುಲ್ ನನ್ನ ಪ್ರಶ್ನೆಗೆ ಉತ್ತರಿಸಬೇಕಿದೆ, ರಾಹುಲ್ ಗಾಂಧಿ ಉಗ್ರ ಹಫೀಜ್ ಸಯೀದ್ ನನ್ನು ಖುಷಿ ಪಡೆಸುವಂತಹ ಮಾತುಗಳನ್ನೇಕಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರವನ್ನು ದೂರುತ್ತಿರುವವರ ವಿರುದ್ಧ ಕಿಡಿ ಕಾರಿದ ಗಿರಿರಾಜ್ ಸಿಂಗ್, ದೇಶ ಉಳಿದರೆ ಮಾತ್ರ ರಾಜಕೀಯ ಉಳಿಯುತ್ತದೆ ಎಂಬ ಸತ್ಯವನ್ನು ಎಲ್ಲರೂ ತಲೆಯಲ್ಲಿಟ್ಟುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.