ಶ್ರೀನಗರ: ಪಾಕಿಸ್ತಾನ ಅಕ್ರಮವಾಗಿ ಭಾರತಕ್ಕೆ ಸೇರಿದ ಕಾಶ್ಮೀರ ಭಾಗವನ್ನು ಆಕ್ರಮಿಸಿಕೊಂಡಿದ್ದು, ನಿಜವಾಗಿಯೂ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬ್ರಿಟನ್ ಸಂಸದ ರಾಬರ್ಟ್ ಜಾನ್ ಬ್ಲಾಕ್‌ಮನ್ ಹೇಳಿದ್ದಾರೆ.
ಜಮ್ಮುವಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಬರ್ಟ್ ಅವರು, ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಭಾಗ ಭಾರತದ ಅವಿಭಾಜ್ಯ ಅಂಗವಾಗಿದೆ. ಆ ಭಾಗ ಮೇಲೆ ಭಾರತಕ್ಕೆ ಸಂಪೂರ್ಣ ಅಧಿಕಾರವಿದೆ. ಪಾಕಿಸ್ತಾನ ಸ್ವಯಂಪ್ರೇರಿತವಾಗಿ ಇದನ್ನು ಭಾರತಕ್ಕೆ ಬಿಟ್ಟುಕೊಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
“ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಬಿಕ್ಕಟ್ಟು ಶಾಶ್ವತವಾಗಿ ಪರಿಹಾರವಾಗಬೇಕು ಎಂದರೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಕಾಶ್ಮೀರ ಪ್ರದೇಶವನ್ನು ಬಿಟ್ಟುಕೊಡಬೇಕು. 1947ಕ್ಕೂ ಮೊದಲು ಇದ್ಧಂತೆ ಎಲ್ಲ ರಾಜ್ಯಗಳು ಪ್ರಜಾಪ್ರಭುತ್ವ ಭಾರತದ ಅವಿಭಾಜ್ಯ ಅಂಗವಾಗಬೇಕು. ದಕ್ಷಿಣ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಸಲು ಇದೊಂದೇ ಪರಿಹಾರ ಎಂದು ರಾಬರ್ಟ್ ಹೇಳಿದ್ದಾರೆ.
1994 ಫೆಬ್ರವರಿ 22ರಂದು ಭಾರತ ಸಂಸತ್ತಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ರಾಜ್ಯ ಭಾರತದ ಅವಿಭಾಜ್ಯ ಅಂಗ ಮತ್ತು ಇದನ್ನು ಯಾರಾದರೂ ಭಾರತದಿಂದ ಕಿತ್ತುಕೊಳ್ಳಲು ಯತ್ನಿಸಿದರೆ ಅವರ ವಿರುದ್ಧ ಯಾವುದೇ ರೀತಿ ಪ್ರತಿರೋಧ ಒಡ್ಡಲು ಭಾರತ ಸಿದ್ಧ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ ಅಕ್ರಮವಾಗಿ ಆಕ್ರಮಿಸಿಕೊಳ್ಳಲಾಗಿರುವ ಜಮ್ಮು ಪ್ರದೇಶವನ್ನು ಪಾಕಿಸ್ತಾನ ಕೂಡಲೇ ಬಿಟ್ಟುಕೊಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿತ್ತು.