ನವದೆಹಲಿ: ನಾನು ಒಬ್ಬ ಭಾರತೀಯ, ಈ ದೇಶದ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ದೇಶ ದ್ರೋಹದ ಆರೋಪದ ಮೇಲೆ ಜೈಲು ಪಾಲಾಗಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಇಂದು ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾದ ಕನ್ಹಯ್ಯ ಕುಮಾರ್, ‘ನಾನು ಈ ಮುಂಚೆನೂ ಹೇಳಿದ್ದೇನೆ. ನಾನು ಒಬ್ಬ ಭಾರತೀಯ. ಈ ದೇಶದ ಸಂವಿಧಾನ ಹಾಗೂ ನ್ಯಾಯಾಂಗದ ಮೇಲೆ ನನಗೆ ನಂಬಿಕೆ’ ಎಂದು ಹೇಳಿದರು.
ನನ್ನ ವಿರುದ್ಧ ಮಾಧ್ಯಮ ವಿಚಾರಣೆ ತುಂಬಾ ನೋವುಂಟು ಮಾಡಿದೆ. ಒಂದು ವೇಳೆ ನಾನು ದೇಶ ದ್ರೋಹಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿದ್ದರೆ ನೀವು ದಯವಿಟ್ಟು ನನ್ನನ್ನು ಜೈಲಿಗೆ ಕಳುಹಿಸಿ. ಆದರೆ ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೆ ಮಾಧ್ಯಮ ವಿಚಾರಣೆ ನಡೆಸಬಾರದು ಎಂದು ಕನ್ಹಯ್ಯ ವಿಚಾರಣೆ ಆರಂಭದಲ್ಲಿ ಹೇಳಿಕೆ ನೀಡಿದ್ದರು.
ಜೆಎನ್ ಯು ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಕಳೆದ ವಾರ ದೆಹಲಿ ಪೊಲೀಸರು ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಿದ್ದು, ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
An appeal issued by Kanhaiya pic.twitter.com/mzbSMQgkN4
— BS Bassi (@BhimBassi) February 17, 2016
ಇನ್ನು ಕನ್ಹಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ, ಆರೋಪಿ ಕನ್ಹಯ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ, ಅದಕ್ಕೆ ದೆಹಲಿ ಪೊಲೀಸರು ವಿರೋಧ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ವೈಯಕ್ತಿಕವಾಗಿ, ಆ ಯುವಕನಿಗೆ ಜಾಮೀನು ನೀಡಬಹುದು’ ಎಂದು ಬಸ್ಸಿ ವರದಿಗಾರರಿಗೆ ತಿಳಿಸಿದ್ದಾರೆ.