ಹೈದರಾಬಾದ್: ಹಲ್ಲೆಗೆ ಯತ್ನಿಸುತ್ತಿದ್ದ ಪತಿಯಿಂದ ತನ್ನ ತಂಗಿಯನ್ನು ರಕ್ಷಿಸಲು ಹೋಗಿ ವ್ಯಕ್ತಿಯೊಬ್ಬ ಭಾವನಿಂದಲೇ ಕೊಲೆಯಾದ ಘಟನೆ ಬುಧಾರ ತೆಲಂಗಾಣದ ಮೆದಾಕ್ ಜಿಲ್ಲೆಯ ಸಿದ್ದಿಪೇಟ್ ನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಕರಿಮನಗರ ಜಿಲ್ಲೆಯ ವೇಮುಲವಾಡದ ಎಂ.ಮಹೇಶ್(35) ತನ್ನ ಕುಟುಂಬದ ಕಾರ್ಯಕ್ರಮವೊಂದಕ್ಕೆ ತಂಗಿ ಕವಿತಾಳನ್ನು ಕರೆದುಕೊಂಡು ಹೋಗಲು ನಿನ್ನೆ ಭಾವನ ಮನೆಗೆ ಬಂದಿದ್ದರು.
ಮಹೇಶ್ ಮನೆಗೆ ಬಂದಾಗ ಕವಿತಾ ಪತಿ ತಿರುಪತಿ ಮನೆಯಲ್ಲಿರಲಿಲ್ಲ. ಹೀಗಾಗಿ ಕವಿತಾ ಪತಿಗೆ ಕರೆ ಮಾಡಿ, ಕಾರ್ಯಕ್ರಮಕ್ಕೆ ಕರೆಯಲು ಮಹೇಶ್ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಆದರೂ ತಕ್ಷಣಕ್ಕೆ ಮನೆಗೆ ಬಾರದ ತಿರುಪತಿ, ತಡರಾತ್ರಿ ಬಂದು ಮಹೇಶ್ ನೊಂದಿಗೆ ಜಗಳ ಮಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿದ ಕವಿತಾ ಪತಿಯನ್ನು ಸಮಾಧಾನ ಮಾಡಲು ಯತ್ನಿಸಿದ್ದಾಳೆ. ಆದರೆ ಸಮಾಧಾನಗೊಳ್ಳದ ಪತಿ ಕವಿತಾಳನ್ನೇ ಹೊಡೆಯಲು ಹೋದಾಗ ತಂಗಿಯನ್ನು ರಕ್ಷಿಸಲು ಮಹೇಶ್ ಬಂದಿದ್ದಾರೆ. ಈ ವೇಳೆ ತಿರುಪತಿ ಮಹೇಶ್ ನನ್ನು ಜೋರಾಗಿ ತಳ್ಳಿದ ಪರಿಣಾಮ ಕೇಳಗೆ ಬಿದ್ದಿದ್ದಾರೆ. ಇದರಿಂದ ಮಹೇಶ್ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಹೇಶ್ ಮೃತಪಟ್ಟಿದ್ದಾರೆ ಎಂದು ಸಿದ್ದಿಪೇಟ್ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಸೈದುಲು ಅವರು ತಿಳಿಸಿದ್ದಾರೆ.