ನವದೆಹಲಿ (ಪಿಟಿಐ): ಕುಡಿದ ಮತ್ತಿನಲ್ಲಿರುವ ಚಾಲಕನೊಬ್ಬ ಒಂದು ‘ಸಜೀವ ಆತ್ಮಹತ್ಯಾ ಮಾನವ ಬಾಂಬ್’ ಇದ್ದಂತೆ… –ಇದು ದೆಹಲಿ ನ್ಯಾಯಾಲಯದ ಅನಿಸಿಕೆ.
ಕುಡಿದು ದ್ವಿಚಕ್ರ ವಾಹನ ಚಾಲನೆ ಮಾಡಿದ ಆರೋಪ ಎದುರಿಸುತ್ತಿದ್ದ ಬದರಪುರ ನಿವಾಸಿ ಜೋಗಿ ವರ್ಗೀಸ್ ಅವರಿಗೆ ವಿಚಾರಣಾಧೀನ ನ್ಯಾಯಾಲಯದಿಂದ ಆರು ದಿನಗಳ ಜೈಲುವಾಸ ಹಾಗೂ ಎರಡು ಸಾವಿರ ರೂಪಾಯಿ ದಂಡ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶ ಲೋಕೇಶ್ ಕುಮಾರ್ ಶರ್ಮಾ ಅವರು ಹೀಗೆ ಅಭಿಪ್ರಾಯಪಟ್ಟರು.
ಕುಡಿದು ವಾಹನ ಚಾಲನೆ ಮಾಡುತ್ತಿದ್ದಾಗ ಅರ್ಜಿದಾರದ ದೇಹದಲ್ಲಿ ನಿಗದಿತ ಪ್ರಮಾಣಕ್ಕಿಂತ 42 ಪಟ್ಟು ಹೆಚ್ಚು ಮದ್ಯದ ಅಂಶವಿತ್ತು. ಆದ್ದರಿಂದ ವಿಚಾರಣಾಧೀನಾ ನ್ಯಾಯಾಲಯ ನೀಡಿರುವ ತೀರ್ಪು ಸರಿಯಾಗಿಯೇ ಇದೆ ಎಂದ ನ್ಯಾಯಾಧೀಶ ಶರ್ಮಾ, ಅರ್ಜಿಯನ್ನು ವಜಾಗೊಳಿಸಿದರು. ಅಲ್ಲದೇ, ಅರ್ಜಿದಾರರನ್ನು ಕೂಡಲೇ ವಶಕ್ಕೆ ಪಡೆಯುವಂತೆ ಸೂಚಿಸಿದರು.
‘ದ್ವಿಚಕ್ರ ವಾಹನ ನಡೆಸುತ್ತಿದ್ದ ವೇಳೆ ಅರ್ಜಿದಾರ ಅತಿಯಾಗಿ ಕುಡಿದಿದ್ದ. ಆತನ ಸಜೀವ ಆತ್ಮಹತ್ಯಾ ಮಾನವ ಬಾಂಬ್‌ನಂತೆ ವರ್ತಿಸುತ್ತಿದ್ದ. ಆತನ ವಾಹನದ ಸ್ಥಿತಿಯೂ ಅಂತೆಯೇ ಇತ್ತು. ಚಾಲನೆ ವೇಳೆ ಸ್ವಲ್ಪ ವ್ಯತ್ಯಾಸವಾಗಿದ್ದರೂ, ತನ್ನ ಜೀವದ ಜತೆಗೆ ಹಲವು ಜೀವಗಳಿಗೆ ಮಾರಕವಾಗುವ ಸಾಧ್ಯತೆಗಳಿತ್ತು ಎಂದು ಅನಿಸುತ್ತದೆ’ ಎಂದರು.
‘ಆದ್ದರಿಂದ ಅರ್ಜಿದಾರ ನ್ಯಾಯಾಲಯದ ಅನುಕಂಪಕ್ಕೆ ಅರ್ಹವಲ್ಲ. ಸ್ಥಳೀಯ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶ ಮಾಡುವುದರಲ್ಲಿ ಅರ್ಥವಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಮೋಟಾರು ವಾಹನಗಳ ಕಾಯ್ಡೆಯಡಿಯಲ್ಲಿ ವರ್ಗೀಸ್ ಅವರನ್ನು ವಿಚಾರಣಾಧೀನ ನ್ಯಾಯಾಲಯ ದೋಷಿ ಎಂದು ಕಳೆದ ವರ್ಷದ ಡಿಸೆಂಬರ್ 21ರಂದು ತೀರ್ಪು ನೀಡಿತ್ತು.
ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಿತ್ತು. ಜತೆಗೆ ಆರು ತಿಂಗಳ ಬಳಿಕ ಮತ್ತೆ ಚಾಲನಾ ಪರವಾನಗಿ ಪರೀಕ್ಷೆಗೆ ಒಳಪಡುವಂತೆ ಸೂಚಿಸಿತ್ತು.