ತಿರುವನಂತಪುರ: ಸೌರ ಹಗರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಮತ್ತು ವಿದ್ಯುತ್ ಸಚಿವ ಅರಯಾದನ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ತ್ರಿಶ್ಯೂರ್ ವಿಚಕ್ಷಣಾ ನ್ಯಾಯಾಲಯ ನೀಡಿದ ಆದೇಶವನ್ನು ಕೇರಳ ಹೈಕೋರ್ಟ್ ಅಮಾನತುಗೊಳಿಸಿದೆ.
ಇದರೊಂದಿಗೆ ಮುಖ್ಯಮಂತ್ರಿ ಚಾಂಡಿ ಅವರಿಗೆ ಭಾರಿ ನಿರಾಳತೆ ಲಭಿಸಿದೆ. ವಿಚಕ್ಷಣಾ ನ್ಯಾಯಾಲಯವು ತನ್ನ ಅಧಿಕಾರದ ಸ್ವರೂಪ ಮತ್ತು ಮಿತಿಗಳ ಅರಿವಿಲ್ಲದೆ ಯಾಂತ್ರಿಕವಾಗಿ ವರ್ತಿಸಿದೆ ಎಂದು ಹೈಕೋರ್ಟ್ ಹೇಳಿದೆ
ಸೌರ ಹಗರಣದಲ್ಲಿ ತಮ್ಮ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ತ್ರಿಶ್ಯೂರ್ ವಿಚಕ್ಷಣಾ ನ್ಯಾಯಾಲಯ ಮಾಡಿದ ಆದೇಶದ ವಿರುದ್ಧ ಶುಕ್ರವಾರ ಹೈಕೋರ್ಟ್ ಮೊರೆ ಹೊಕ್ಕಿದ್ದ ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಮತ್ತು ವಿದ್ಯುತ್ ಸಚಿವ ಅರಯಾದನ್ ಅವರು ತಮ್ಮ ವಿರುದ್ಧದ ಎಫ್ಐಆರ್ ರದ್ದು ಪಡಿಸುವಂತೆ ಮನವಿ ಮಾಡಿದ್ದರು.
ಈ ಮಧ್ಯೆ ಸಿಪಿಐ-ಎಂ ನೇತೃತ್ವದ ಎಲ್ಡಿಎಫ್ ಮತ್ತು ಬಿಜೆಪಿ ತತ್ ಕ್ಷಣ ರಾಜೀನಾಮೆ ಸಲ್ಲಿಸುವಂತೆ ಚಾಂಡಿ ಅವರನ್ನು ಆಗ್ರಹಿಸಿವೆ. ಆದರೆ ತಮ್ಮ ವಿರುದ್ಧದ ಎಲ್ಲಾ ಆಪಾದನೆಗಳನ್ನೂ ನಿರಾಕರಿಸಿರುವ ಮುಖ್ಯಮಂತ್ರಿ ‘ಮಾನಹಾನಿಕರವಾದ ಸುಳ್ಳು ಆರೋಪಗಳನ್ನು ಮಾಡಿ ತಮ್ಮನ್ನು ಹುದ್ದೆಯಿಂದ ಕಿತ್ತುಹಾಕಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.