ನವದೆಹಲಿ(ಪಿಟಿಐ): ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ನಬಂ ಟುಕಿ ಅವರು ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಮನವಿ ಸಲ್ಲಿಸಿದ್ದಾರೆ.
‘ಕಾಂಗ್ರೆಸ್ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದೆ’ ಎಂದು ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದ ನಬಂ ಟುಕಿ ಅವರು, ‘ಖಂಡಿತವಾಗಿಯೂ ನಾವು ಬಹುಮತ ಸಾಬೀತುಪಡಿಸುವೆವು. ಸತ್ಯಕ್ಕೆ ಎಂದಿಗೂ ಸೋಲಾಗದು ಎಂಬುದು ನಮಗೆ ತಿಳಿದಿದೆ. ಪ್ರತಿಬಾರಿಯೂ ಸತ್ಯವೇ ಗೆಲ್ಲುತ್ತದೆ’ ಎಂದು ‘ಟ್ವೀಟ್’ ಮಾಡಿದ್ದರು.
ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ನೇತೃತ್ವದ ಐವರು ಸದಸ್ಯರ ಪೀಠ, ಅರುಣಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು ‘ಗಂಭೀರ ವಿಷಯ’ ಎಂದು ಹೇಳಿ, ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರಕ್ಕೆ ಬುಧವಾರ ನೊಟಿಸ್ ಜಾರಿ ಮಾಡಿದೆ.