ಹೊಸದಿಲ್ಲಿ : “ಹಿಂದೆಲ್ಲ ಚುನಾವಣೆ ಎಂದರೆ ಕಾಂಗ್ರೆಸ್ ಅಥವಾ ಇಂದಿರಾಗಾಂಧಿ ವಿರುದ್ಧ ಎಲ್ಲ ಪಕ್ಷಗಳು ಎಂದಿತ್ತು. ಈಗ ಚುನಾವಣೆ ಎಂದರೆ ಬಿಜೆಪಿ ಅಥವಾ ನರೇಂದ್ರ ಮೋದಿ ವಿರುದ್ಧ ಎಲ್ಲ ಪಕ್ಷಗಳು ಎಂಬ ಸ್ಥಿತಿ ಉತ್ಪನ್ನವಾಗಿದೆ. ಇಂತಹ ಬದಲಾವಣೆಯನ್ನು ತರುವಲ್ಲಿ ಬಿಜೆಪಿ ಯಶಸ್ವಿಯಾಗಿರುವುದೇ ಅದರ ಹೆಚ್ಚುಗಾರಿಕೆ ಮತ್ತು ಹೆಗ್ಗಳಿಕೆಯಾಗಿದೆ ಎಂದು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ವಿರೋಧ ಪಕ್ಷಗಳ ತತ್ವ ಮತ್ತು ಸಿದ್ಧಾಂತಗಳು ಪರಸ್ಪರ ತದ್ವಿರುದ್ಧವಾಗಿರುವ ಹೊರತಾಗಿಯೂ ಅವುಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿ ಬಿಜೆಪಿ ವಿರುದ್ಧ ಒಗ್ಗೂಡಿವೆ ಎಂದು ಅಮಿತ್ ಶಾ, ಈ ರೀತಿಯ ರಾಜಕೀಯ ಕೂಟಗಳ ವಿರುದ್ದ ಶೇ.51ರ ಗೆಲವನ್ನು ಸಾಧಿಸುವ ಕಾರ್ಯತಂತ್ರವನ್ನು ಬಿಜೆಪಿ ಮುಂಬರುವ ರಾಜ್ಯ ವಿಧಾನಸಭೆಗಳ ಚುನಾವಣೆಗಳಲ್ಲಿ ಅನುಷ್ಠಾನಕ್ಕೆ ತರಲಿದೆ ಮತ್ತು ಆ ನಿಟ್ಟಿನಲ್ಲಿ ಪೂರ್ಣ ಯಶಸ್ಸನ್ನು ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮೊನ್ನೆ ಭಾನುವಾರವಷ್ಟೇ ಮುಂದಿನ 3 ವರ್ಷಗಳ ಪೂರ್ಣಾವಧಿಗೆ ಬಿಜೆಪಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ, ಪ್ರದಾನಿ ಮೋದಿ ಅವರ ಅತ್ಯಂತ ನಿಕಟ ಮತ್ತು ನಂಬುಗೆಯ ವ್ಯಕ್ತಿಯಾಗಿರುವ ಅಮಿತ್ ಶಾ ಅವರು “ಹಿಂದುಸ್ಥಾನ್ ಟೈಮ್ಸ್’ ಜತೆಗೆ ಮಾತನಾಡುತ್ತಿದ್ದರು.
“ಬಿಹಾರ ಮತ್ತು ಅದಕ್ಕೆ ಮೊದಲಿನ ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋತಿರಬಹುದು; ಆದರೆ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ನಿರ್ವಹಣೆಯನ್ನು ತೋರಿ ಬಹುಮತ ಗೆಲ್ಲುವುದು ನಿಶ್ಚಿತ’ ಎಂದು ಅಮಿತ್ ಶಾ ಹೇಳಿದರು.
-ಉದಯವಾಣಿ