ತಿರುವನಂತಪುರಂ, ಜ. ೨೭- ಸೋಲಾರ್ ಹಗರಣ ಪ್ರಕರಣದಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಮುಂದಾಗುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಓಮನ್ ಚಾಂಡಿ ಹೇಳಿದ್ದಾರೆ.
`ನಾನು ಈಗಾಗಲೇ ಈ ಬಗ್ಗೆ ನ್ಯಾಯಾಂಗ ಆಯೋಗದ ಮುಂದೆ ಹಾಜರಾಗಿ ಸುದೀರ್ಘ ವಿವರಣೆ ನೀಡಿದ್ದೇನೆ. ಮತ್ತೆ ಸುಳ್ಳು ಪತ್ತೆ ಪರೀಕ್ಷೆಗೆ ಯಾಕೆ ಒಳಗಾಗಬೇಕು’ ಎಂದು ಪ್ರಶ್ನಿಸಿದ್ದಾರೆ.
ಸೋಲಾರ್ ಪ್ಯಾನಲ್ಸ್ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೂ ರಾಧಾಕೃಷ್ಣನ್ ಅವರ ವಕೀಲರು, ಮುಖ್ಯಮಂತ್ರಿ ಚಾಂಡಿ, ಸುಳ್ಳುಪತ್ತೆ ಪರೀಕ್ಷೆಗೆ ಒಳಗಾಗಲಿ ಎಂದು ನ್ಯಾಯಾಲಯದಲ್ಲಿ ಕೋರಿದ್ದಾರೆ.
ಈ ಹಗರಣದಲ್ಲಿ ಮುಖ್ಯಮಂತ್ರಿ ಚಾಂಡಿ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿಯೇ ಆರೋಪಿ ಸ್ಥಾನದಲ್ಲಿ ನ್ಯಾಯಾಂಗ ಆಯೋಗದ ವಿಚಾರಣೆಗೆ ಹಾಜರಾಗಿದ್ದಾರೆ.
ಕೇರಳದಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದ್ದು, ಮುಖ್ಯಮಂತ್ರಿ ವಿರುದ್ಧದ ಈ ಹಗರಣವನ್ನು ಚುನಾವಣಾ ವಸ್ತುವಾಗಿಸಿಕೊಳ್ಳಲು ವಿರೋಧ ಪಕ್ಷಗಳು ಉತ್ಸುಕವಾಗಿವೆ.
ಮುಖ್ಯಮಂತ್ರಿಯೊಬ್ಬರು ಹಗರಣದಲ್ಲಿ ನ್ಯಾಯಾಂಗ ಆಯೋಗದ ಎದುರು ಹಾಜರಾಗುತ್ತಿರುವುದು ಇದೇ ಮೊದಲು, ಚಾಂಡಿ ಮುಖ್ಯಮಂತ್ರಿ ಹುದ್ದೆ ಘನತೆಗೆ ಕುಂದು ತಂದಿದ್ದಾರೆ ಎಂದು ಸಿಪಿಎಂ ಟೀಕಿಸಿದೆ.
ರಾಷ್ಟ್ರೀಯ