ರಾಷ್ಟ್ರೀಯ

‘ಉಪೇಕ್ಷಿತ’ ಮಹಿಳಾ ದೂರುಗಳ ವಿಚಾರಣೆಗೆ ಆಯೋಗ: ದೆಹಲಿಯ ಎಎಪಿ ಸರ್ಕಾರ ನಿರ್ಧಾರ

Pinterest LinkedIn Tumblr

Kejriwalನವದೆಹಲಿ (ಪಿಟಿಐ): ಪೊಲೀಸರಿಂದ ‘ಉಪೇಕ್ಷೆ’ಗೆ ಒಳಗಾದ ಮಹಿಳಾ ದೂರುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ವಿಚಾರಣಾ ಆಯೋಗವೊಂದನ್ನು ನೇಮಿಸಿದೆ.

ಮಹಿಳೆಯರ ವಿರುದ್ಧದ ಯಾವೆಲ್ಲ ಪ್ರಕರಣಗಳಲ್ಲಿ ಕ್ರಮಕೈಗೊಳ್ಳಬಹುದು ಹಾಗೂ ಪ್ರಸಕ್ತ ಇರುವ ಯಾವೆಲ್ಲ ಕಾಯ್ದೆಗಳಿಗೆ ತಿದ್ದುಪಡಿ ತರಬಹುದು ಎಂದು ಸೂಚಿಸುವ ಕಾರ್ಯ ವಿಚಾರಣೆ ಆಯೋಗದ್ದಾಗಿದೆ.

ಮೂರು ಸದಸ್ಯರ ಆಯೋಗವನ್ನು ನಿವೃತ್ತಿ ಜಿಲ್ಲಾ ನ್ಯಾಯಾಧೀಶರಾದ ದಿನೇಶ್ ದಯಾಳ್ ಅವರು ಮುನ್ನಡೆಸಲಿದ್ದಾರೆ. ತನಿಖಾ ಆಯೋಗದ ಅವಧಿಯು 2 ವರ್ಷದ್ದಾಗಿದೆ. ಮೊದಲ ಸಭೆ ನಡೆಸುವ ದಿನಾಂಕದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ತನಿಖಾ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಈ ಆಯೋಗವು 2013ರ ಫೆಬ್ರುವರಿ ನಂತರ ನಡೆದ ಹಿಂಸಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ.

ಈ ತನಿಖಾ ಆಯೋಗ ನೇಮಕದ ಕುರಿತು ಜನವರಿ 19ರಂದು ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಧಿಸೂಚನೆ ಹೊರಡಿಸಿತ್ತು.

ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರವು ಕಳೆದ ಆಗಸ್ಟ್‌ನಲ್ಲಿ ಒಂದು ದಿನದ ಅಧಿವೇಶನ ಕರೆದು ಈ ಸಂಬಂಧ ನಿರ್ಧಾರ ಕೈಗೊಂಡಿತ್ತು. 2015ರ ಜುಲೈ 16ರಂದು ದೆಹಲಿಯ ಆನಂದ ಪ್ರಭಾತ್ ಪ್ರದೇಶದಲ್ಲಿ 19 ವರ್ಷದ ಯುವತಿಯೊಬ್ಬರ ಭೀಕರ ಕೊಲೆ ಘಟನೆಗೆ ಸಂಬಂಧಿಸಿದಂತೆ ಎಎಪಿ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

Write A Comment