ನವದೆಹಲಿ, ಜ.೨೬: ಭಯೋತ್ಪಾದಕರ ನಾನಾ ಮಾದರಿಯ ಬೆದರಿಕೆಗಳ ಹಿನ್ನೆಲೆಯಲ್ಲಿ ದಿಗ್ಭ್ರಮೆಗೊಂಡಿದ್ದ ಭಾರತದ ೬೭ನೇ ಗಣರಾಜ್ಯೋತ್ಸವ ಆಚರಣೆ ಸುಸೂತ್ರವಾಗಿ ಮುಕ್ತಾಯಗೊಂಡ ಪರಿಣಾಮ ದೇಶದ ಜನರು ನಿಟ್ಟಿಸಿರುಬಿಟ್ಟಿದ್ದಾರೆ.
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ರಕ್ಷಣಾ ಪಡೆಗಳ ಸಾಮರ್ಥ್ಯದ ಪ್ರದರ್ಶನ ನಡೆಯಿತು. ಫ್ರಾನ್ಸ್ ಅಧ್ಯಕ್ಷ ಪ್ರಾಂಕೋಯಿಸ್ ಹೊಲಾಂಡ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮೊದಲಾದವರು ಪಾಲ್ಗೊಂಡಿದ್ದ ಈ ಉತ್ಸವಕ್ಕೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ ಗಣರಾಜ್ಯೋತ್ಸವ ವೈಭವಯುತವಾಗಿ ನಡೆದಿರುವ ವರದಿಗಳು ಬಂದಿವೆ. ಇದೇ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಪುಂಡಾಟಿಕೆ ನಡೆಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಗುಂಡು ಹಾರಿಸಿರುವುದು ವರದಿಯಾಗಿದೆ.
ಇತ್ತೀಚೆಗೆ ದೇಶದ ಹಲವೆಡೆ ಶಂಕಿರ ಉಗ್ರರ ಬಂಧನದಿಂದ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬೆದರಿಕೆಯ ಕಾರ್ಮೋಡ ಕವಿದಿತ್ತು. ಇದರಿಂದ ಹಿಂದೆಂದೂ ಕಂಡರಿಯದ ಭದ್ರತೆ ಏರ್ಪಡಿಸಲಾಗಿತ್ತು. ಇದೀಗ ದೇಶದ ಎಲ್ಲಾ ರಾಜ್ಯಗಳಲ್ಲಿ ಸುಸೂತ್ರವಾಗಿ ಕಾರ್ಯಕ್ರಮ ನಡೆದಿರುವುದರಿಂದ ಪೊಲೀಸರು, ಸಾರ್ವಜನಿಕರು ಮತ್ತು ಸರ್ಕಾರ ನಿಟ್ಟುಸಿರುಬಿಟ್ಟಿದೆ. ಹಲವು ದಿನಗಳಿಂದ ಪೊಲೀಸರು ಅಹರ್ನಿಶಿ ಕೆಲಸ ಮಾಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿತ್ತು. ಇದೀಗ ಪೊಲೀಸರು ನಿರಾಳರಾಗಿದ್ದಾರೆ. ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿತ್ತು.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಪ್ರಾಂಕೋಯಿಸ್ ಹೊಲಾಂಡ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿತ್ತು. ಪರೇಡ್ ನಡೆದ ರಾಜ್‌ಪಥ್ ರಸ್ತೆ ಸಂಪೂರ್ಣ ಪೊಲೀಸ್‌ಮಯವಾಗಿತ್ತು. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಗುಂಡಿಕ್ಕುವ ಅಧಿಕಾರವನ್ನೂ ಪೊಲೀಸರಿಗೆ ನೀಡಲಾಗಿತ್ತು.
ಫ್ರಾನ್ಸ್ ಅಧ್ಯಕ್ಷರು ತಂಗುವ ಹೋಟೆಲ್ ಮತ್ತು ವಿಮಾನನಿಲ್ದಾಣ ಸುತ್ತಮುತ್ತಲ ಪ್ರದೇಶಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಇಡೀ ದೆಹಲಿ ಪೊಲೀಸ್ ಮತ್ತು ಭಾರತೀಯ ಸೇನೆಯ ಕಣ್ಗಾವಲಿನಲ್ಲಿತ್ತು. ಮೂರು ದಿನಗಳ ಭಾರತ ಭೇಟಿಗೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷರು ಇಂದು ಸಂಜೆ ಹಿಂದಿರುಗಲಿದ್ದಾರೆ.
ಕೇಂದ್ರ ದೆಹಲಿಯಿಂದ ಪಾಲಮ್ ತಾಂತ್ರಿಕ ಪ್ರದೇಶದವರೆಗಿನ ಸಂಪೂರ್ಣ ಪ್ರದೇಶ ಸೇನೆಯ ನಿಗಾದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಪ್ರದೇಶ ಸೇನೆಯ ರಾಡಾರ್ ನಿಗಾದಲ್ಲಿಡಲಾಗಿತ್ತು.
ದೆಹಲಿ ಪೊಲೀಸರೊಂದಿಗೆ ಫ್ರಾನ್ಸ್‌ನ ೧೩೬ ಸೈನಿಕರು ಕೂಡ ಭದ್ರತಾ ಕಾರ್ಯದಲ್ಲಿ ನಿರತಾಗಿದ್ದು, ರಾಜ್‌ಪಥದಿಂದ ಫ್ರಾನ್ಸ್ ಅಧ್ಯಕ್ಷರು ಬರುವಾಗ ಈ ಎರಡೂ ಪಡೆಗಳು ಭದ್ರತೆ ಒದಗಿಸಿದೆ.
ರಾಜ್‌ಪಥ ಮಾರ್ಗವನ್ನು ಸಿ೪೧ ಕಮಾಂಡ್ ಮತ್ತು ನಿಯಂತ್ರಣ ಕೊಠಡಿಯಿಂದ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಿಗಾ ವಹಿಸಿದ್ದಾರೆ. ಪರೇಡ್ ಸಂದರ್ಭದಲ್ಲಿ ಕೇಂದ್ರ ದೆಹಲಿಯಲ್ಲಿ ೧೨೦ ಸ್ಥಳಗಳಲ್ಲಿ ೩೦೦ ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ರಾಜ್‌ಪಥ್‌ದಲ್ಲಿ ಎನ್‌ಎಸ್‌ಜಿ ಮತ್ತು ಭಾರತೀಯ ಸೇನೆಯ ಅಧಿಕಾರಿಗಳಿಗೆ ಸಹಕಾರ ನೀಡಲು ಸ್ನೈಪರ್‍ಸ್‌ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕ್ಷಣಕಣದ ಚಟುವಟಿಕೆಗಳನ್ನು ಭಾರತೀಯ ವಾಯುಪಡೆಯ ಡ್ರೋನ್‌ಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತವೆ. ಡಾಲ್‌ಹೌಸಿ ರಸ್ತೆ, ರಾಜ್‌ಪಥ್ ರಸ್ತೆಯಲ್ಲಿ ೬೫ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಎಲ್ಲ ಪ್ರಮುಖ ದ್ವಾರಗಳನ್ನು ಇದು ಚಿತ್ರೀಕರಿಸುತ್ತಿವೆ. ಪರೇಡ್ ಮೈದಾನದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಸ್ನೈಪರ್ಸ್ ಮತ್ತು ಸ್ವಾಟ್ ಪಡೆಯನ್ನು ಕೂಡ ನಿಯೋಜಿಸಲಾಗಿತ್ತು.
ಇದಲ್ಲದೆ ಜನಸಂದಣಿ ಇರುವ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ಪ್ರಮುಖ ಮಾರುಕಟ್ಟೆಗಳು, ಸಿಮಿಮಾ ಮಂದಿರಗಳು ಹಾಗೂ ಪ್ರಾರ್ಥನಾ ಮಂದಿರಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಎಲ್ಲ ಡಿಸಿಪಿ ಮತ್ತು ಹೆಚ್ಚುವರಿ ಡಿಸಿಪಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದರು. ನಗರದ ಹೊರಭಾಗದಲ್ಲಿ ಹೆಲಿಕಾಪ್ಟರ್ ಗಸ್ತು ತಿರುಗುತ್ತಿದ್ದವು. ಒಟ್ಟಿನಲ್ಲಿ ಇಡೀ ರಾಜಧಾನಿ ಪೊಲೀಸರ ಹಿಡಿತದಲ್ಲಿತ್ತು.