ನವದೆಹಲಿ: ಸಂಪತ್ತೆಲ್ಲ ಗಂಡಸರ ಬಳಿಯೇ ಇರೋದು. ಶ್ರೀಮಂತಿಕೆಯಲ್ಲಿ ಗಂಡಸರೇ ಮುಂದು. ಪುರುಷ ಹೇಳಿದಂತೆಯೇ ಮನೆ ನಡೆಯುತ್ತದೆ ಎಂದು ಇನ್ನು ಮುಂದೆ ಹೇಳುವಂತಿಲ್ಲ. ಏಕೆಂದರೆ, ಶ್ರೀಮಂತಿಕೆಯಲ್ಲಿ, ಮನೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಮಹಿಳೆಯರೂ ಮುಂದಿದ್ದಾರೆ. ಕರ್ನಾಟಕ ಸಹಿತ 15 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶೇ. 40ರಷ್ಟು ಮಹಿಳೆಯರು ಆಸ್ತಿ ಹೊಂದಿದ್ದಾರೆ ಅಥವಾ ಜಂಟಿ ಒಡೆಯರಾಗಿದ್ದಾರೆ. ಶೇ. 75ರಷ್ಟು ಮಹಿಳೆಯರು ಮನೆಯ ನಿರ್ಧಾರಗಳಲ್ಲಿ ಭಾಗಿಯಾಗುತ್ತಾರೆ.
ಅದರಲ್ಲೂ ಕರ್ನಾಟಕದ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಆಸ್ತಿವಂತರು. ಮನೆಯಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಕರುನಾಡಿನ ಶೇ. 80ರಷ್ಟು ಹೆಣ್ಣುಮಕ್ಕಳು ಭಾಗಿದಾರರು!
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಮಾಹಿತಿ ಇದೆ. ಶೇ. 51.8ರಷ್ಟು ಆಸ್ತಿವಂತ ಮಹಿಳೆಯರನ್ನು ಹೊಂದುವ
ಮೂಲಕ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಶೇ.58.8 ಆಸ್ತಿವಂತ ಮಹಿಳೆಯರು ಇರುವ ಬಿಹಾರ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮೇಘಾಲಯ ಹಾಗೂ ತ್ರಿಪುರಾ ರಾಜ್ಯಗಳಿದ್ದು ಆ ರಾಜ್ಯಗಳ ತಲಾ ಶೇ.57.3ರಷ್ಟು ಮಹಿಳೆಯರು ಆಸ್ತಿ ಹೊಂದಿದ್ದಾರೆ. ಶೇ.50.5ರಷ್ಟು ಆಸ್ತಿವಂತ ಮಹಿಳೆಯರಿರುವ ತೆಲಂಗಾಣ ಐದನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಮನೆ ನಿರ್ಧಾರದಲ್ಲೂ ಮುಂದೆ: ಸಮೀಕ್ಷೆ ಪ್ರಕಾರ ದೇಶದ ಶೇ.75ರಷ್ಟು ಮಂದಿ ವಿವಾಹಿತ ಮಹಿಳೆಯರು ತಾವೂ ಮನೆ ನಿರ್ಧಾರಗಳಲ್ಲಿ ಭಾಗಿಯಾಗುತ್ತೇವೆ ಎಂದಿದ್ದಾರೆ. ಈ ಸಂಖ್ಯೆ 2005-06ರಲ್ಲಿ ಶೇ.70.2ರಷ್ಟಿತ್ತು. ಪಶ್ಚಿಮ ಬಂಗಾಲದಲ್ಲಿ ಶೇ.89.9ರಷ್ಟು ಮಹಿಳೆಯರು (10 ವರ್ಷ ಹಿಂದೆ ಶೇ.70.2) ಮನೆಯ ನಿರ್ಧಾರಗಳಲ್ಲಿ ಭಾಗಿಯಾಗುತ್ತಾರೆ. ಉತ್ತರಾಖಂಡದಲ್ಲಿ ಶೇ.89.8, ತ್ರಿಪುರಾದಲ್ಲಿ ಶೇ.91.7, ಸಿಕ್ಕಿಂನಲ್ಲಿ ಶೇ.95.3, ಮೇಘಾಲಯದಲ್ಲಿ ಶೇ.91.4, ಮಧ್ಯಪ್ರದೇಶದಲ್ಲಿ ಶೇ.82.8, ಕರ್ನಾಟಕದಲ್ಲಿ ಶೇ.80.4 (2005-06ರಲ್ಲಿ ಶೇ.68.6ರಷ್ಟಿತ್ತು), ಗೋವಾದಲ್ಲಿ ಶೇ.93.8, ಬಿಹಾರದಲ್ಲಿ ಶೇ.75.2 ಮಹಿಳೆಯರು ಮನೆಯ ನಿರ್ಧಾರಗಳಲ್ಲಿ ಪಾಲುದಾರರು ಎಂದು ಸಮೀಕ್ಷೆ ಹೇಳುತ್ತದೆ.
-ಉದಯವಾಣಿ