ನವದೆಹಲಿ: ಪಂಜಾಬ್ ನ ಗುರುದಾಸ್ ಪುರ ಜಿಲ್ಲೆಯ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಹಿರಿಯ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸುಳ್ಳುಪತ್ತೆ ಪರೀಕ್ಷೆಯ ಬಳಿಕ ಕ್ಲೀನ್ ಚಿಟ್ ನೀಡಿರುವುದಾಗಿ ಮೂಲಗಳು ತಿಳಿಸಿವೆ ಎಂದು ಮಾಧ್ಯಮದ ವರದಿ ಹೇಳಿದೆ.
ದಾಳಿ ನಡೆದ ಹಿಂದಿನ ದಿನ ತಮ್ಮನ್ನು ಅಪಹರಿಸಿದ ಉಗ್ರರ ಕುರಿತು ಸಲ್ವಿಂದರ್ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದರು. ಹಾಗಾಗಿ ಪೊಲೀಸ್ ವರಿಷ್ಠಾಧಿಕಾರಿ ಸಿಂಗ್ ಅವರನ್ನು ಎನ್ಐಎ ಕಳೆದ 2 ವಾರಗಳಲ್ಲಿ ಹಲವು ಬಾರಿ ವಿಚಾರಣೆ ಒಳಪಡಿಸಿತ್ತು. ಅಲ್ಲದೇ ಸುಳ್ಳುಪತ್ತೆ ಪರೀಕ್ಷೆಯನ್ನೂ ಮಾಡಿಸಿತ್ತು.
ಸಲ್ವಿಂದರ್ ಸಿಂಗ್ ಊರಾದ ಅಮೃತ್ ಸರ್ ಸೇರಿದಂತೆ ಹಲವೆಡೆ ಎನ್ ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಆದರೆ ಸಿಂಗ್ ಉಗ್ರರ ಜೊತೆ ಸಂಬಂಧ ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿರಲಿಲ್ಲವಾಗಿತ್ತು. ಯಾವುದೇ ದಾಖಲೆಗಳು ದೊರೆತಿಲ್ಲವಾಗಿತ್ತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಡಿಸೆಂಬರ್ 31ರ ರಾತ್ರಿ ತನ್ನ ಅಡುಗೆ ತಯಾರಿ ವ್ಯಕ್ತಿ ಹಾಗೂ ಗೆಳೆಯನ ಜೊತೆ ರಾತ್ರಿ ಕಾರ್ ನಲ್ಲಿ ತೆರಳುತ್ತಿದ್ದಾಗ ಮುಖಕ್ಕೆ ಬಟ್ಟೆಯಿಂದ ಸುತ್ತಿಕೊಂಡಿದ್ದ ಶಸ್ತ್ರಸ್ತ್ರಧಾರಿ ವ್ಯಕ್ತಿಗಳು ಕಾರನ್ನು ತಡೆದು ನಿಲ್ಲಿಸಿದ್ದರು. ಬಳಿಕ ಅದೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರು. ನಂತರ ಸಿಂಗ್ ಸೇರಿದಂತೆ ಮೂವರನ್ನು ಹಗ್ಗದಿಂದ ಕೈಗೆ, ಬಾಯಿಗೆ ಕಟ್ಟಿ ರಸ್ತೆಯಲ್ಲಿ ಎಸೆದು ಹೋಗಿದ್ದರು ಎಂದು ಸಲ್ವಿಂದರ್ ತಿಳಿಸಿದ್ದರು.
-ಉದಯವಾಣಿ