ಅಹ್ಮದಾಬಾದ್: ತನ್ನ ತಾಯಿ, ಖ್ಯಾತ ನೃತ್ಯಗಾತಿ ಮೃಣಾಲಿನಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸದಿರುವುದಕ್ಕೆ ಟ್ವಿಟರ್‌ನಲ್ಲಿ ತೀವ್ರ ಅಸಮಾಧಾನ ತೋರಿರುವ ನೃತ್ಯಗಾತಿ ಮಲ್ಲಿಕಾ ಸಾರಾಭಾಯಿ ಅವರು “ಇದು ಮೋದಿ ಅವರ ದ್ವೇಷದ ಮನೋಭಾವನೆಯನ್ನು ತೋರ್ಪಡಿಸುತ್ತದೆ’ ಎಂದು ಟೀಕಿಸಿದ್ದಾರೆ.
ನೃತ್ಯಗಾತಿಯಾಗಿದ್ದುಕೊಂಡು ಸಾಮಾಜಿಕ ಕಾರ್ಯಕರ್ತೆಯಾಗಿಯೂ ಖ್ಯಾತರಾಗಿರುವ ಮಲ್ಲಿಕಾ ಸಾರಾಭಾಯಿ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸೆಣಸಿ ಸೋತಿದ್ದರು.
ಖ್ಯಾತ ನೃತ್ಯಗಾತಿಯಾಗಿರುವ ತನ್ನ ತಾಯಿ ಮೃಣಾಲಿನಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಈ ತನಕವೂ ಸಂತಾಪ ವ್ಯಕ್ತಪಡಿಸದಿರುವುದಕ್ಕೆ ಮಲ್ಲಿಕಾ ಸಾರಾಭಾಯಿ ತನ್ನಲ್ಲಿನ ತೀವ್ರ ಅಸಮಾಧಾನವನ್ನು ಟ್ವಿಟರ್ ಮೂಲಕ ಹೊರಹಾಕಿದರು.
“ಪ್ರಿಯ ಪ್ರಧಾನಿಯವರೇ, ನೀವು ನನ್ನ ರಾಜಕಾರಣವನ್ನು ದ್ವೇಷಿಸುತ್ತೀರಿ; ಅಂತೆಯೇ ನಾನು ನಿಮ್ಮ ರಾಜಕಾರಣವನ್ನು ದ್ವೇಷಿಸುತ್ತೇನೆ. ಆದರೆ ದೇಶದ ಸಾಂಸ್ಕೃತಿಕ ರಂಗಕ್ಕೆ ಮತ್ತು ಇಡಿಯ ವಿಶ್ವಕ್ಕೆ ಕಳೆದ 60 ವರ್ಷಗಳ ಅಮೋಘ ಕಾಣಿಕೆ ನೀಡಿರುವ ನನ್ನ ತಾಯಿ ಮೃಣಾಲಿನಿ ಅವರಿಗೂ ನಮ್ಮಿಬ್ಬರೊಳಗಿನ ದ್ವೇಷ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಆಕೆಯ ನಿಧನಕ್ಕೆ ಸಂತಾಪ ಹೇಳಲು ನಿಮ್ಮಿಂದ ಒಂದು ಶಬ್ದವೂ ಹೊರಬಂದಿಲ್ಲ. ಇದು ನಿಮ್ಮ ದ್ವೇಷ ಮನೋಭಾವವನ್ನು ತೋರ್ಪಡಿಸುತ್ತದೆ. ನನ್ನನ್ನು ನೀವು ಎಷ್ಟೇ ದ್ವೇಷಿಸಿದರೂ, ದೇಶದ ಪ್ರಧಾನಿಯಾಗಿ ಆಕೆ (ಮೃಣಾಲಿನಿ ಸಾರಾಭಾಯಿ) ನೃತ್ಯ ರಂಗಕ್ಕೆ ನೀಡಿರುವ ಅನುಪಮ ಕೊಡುಗೆಯನ್ನು ಗುರುತಿಸಿ ಗೌರವಿಸುವ ನುಡಿಗಳನ್ನು ಆಡುವ ಜವಾಬ್ದಾರಿ ನಿಮ್ಮ ಮೇಲಿದೆ. ಆದರೆ ನೀವದನ್ನು ನಿಭಾಯಿಸಿಲ್ಲ; ಇದು ನಿಮಗೆ ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದು ಮಲ್ಲಿಕಾ ಸಾರಾಭಾಯಿ ಟ್ವಿಟರ್‌ನಲ್ಲಿ ತಮ್ಮ ಸಿಟ್ಟನ್ನು ಕಾರಿದ್ದಾರೆ.
-ಉದಯವಾಣಿ