ಮುಜಾಫ್ಪರನಗರ: 2014ರಲ್ಲಿ ನಡೆದ ಸಂಸದೀಯ ಚುನಾವಣೆ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ದ್ವೇಷಭಾಷಣ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಕ್ಲೀನ್ ಚಿಟ್ ಲಭಿಸಿದೆ. ದ್ವೇಷ ಭಾಷಣ ಮಾಡಿದ್ದಕ್ಕೆ ಸಂಬಂಧಿಸಿದಂತೆ ಅಮಿತ್ ಷಾ ಅವರು ವಿರುದ್ಧ ಯಾವುದೇ ಸಾಕ್ಷ್ಯಾಧಾರವೂ ಇಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.
ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಅಂತಿಮ ವರದಿ ಸಲ್ಲಿಕೆಯಾಗಲಿದ್ದು, ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮುಜಾಫ್ಪರನಗರ ಜಿಲ್ಲೆಯ ಬರ್ವಾರ್ ಗ್ರಾಮದಲ್ಲಿ 2014ರ ಏಪ್ರಿಲ್ 4ರಂದು ಮಾಡಿದ ತಮ್ಮ ಭಾಷಣದಲ್ಲಿ ಷಾ ಅವರು ಆಕ್ಷೇಪಾರ್ಹ ಭಾಷೆ ಬಳಸಿದ್ದರು ಎಂದು ಉ.ಪ್ರ. ಪೊಲೀಸರು ಕಕ್ರೋಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಎಫ್ಐಆರ್ನಲ್ಲಿ ತಿಳಿಸಿದ್ದರು.
‘ಮೋದಿ (ನರೇಂದ್ರ ಮೋದಿ) ಅವರು ಗೆದ್ದರೆ, ’ಮುಲ್ಲಾ’ ಮುಲಾಯಂ ಅವರ ಸರ್ಕಾರ ಬೀಳುತ್ತದೆ’ ಎಂದು ಹೇಳಿದ್ದರು ಎಂದು ಷಾ ಅವರ ವಿರುದ್ಧ ಆಪಾದಿಸಲಾಗಿತ್ತು.