ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವು ಸಹಜವಲ್ಲ, ವಿಷಪ್ರಾಷನದಿಂದ ಅವರ ಸಾವು ಸಂಭವಿಸಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ದೀರ್ಘ ಕಾಲದಿಂದ ಕಾಯಲಾಗಿದ್ದ ವರದಿಯನ್ನು ಶುಕ್ರವಾರ ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಫ್ಬಿಐ ಕಳೆದ ವರ್ಷ ಒದಗಿಸಿದ್ದ ಮಾಹಿತಿ ಹಾಗೂ ಪುಷ್ಕರ್ ಅವರ ದೊಡ್ಡ ಕರುಳಿನಂತಹ ಅಂಗಗಳಿಂದ ಸಂಗ್ರಹಿಸಲಾಗಿದ್ದ ವಿಸೇರಾ ಮಾದರಿಗಳ ಪರೀಕ್ಷೆಯ ಬಳಿಕ ದೆಹಲಿ ಸರ್ಕಾರಿ ಸ್ವಾಮ್ಯದ ಏಮ್ಸ್ ಆಸ್ಪತ್ರೆಯ ಉನ್ನತ ವೈದ್ಯರು ಈ ವರದಿಯನ್ನು ಸಿದ್ಧ ಪಡಿಸಿದ್ದಾರೆ.
‘ಸಾವು ಸಹಜವಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ’ ಎಂದು ದೆಹಲಿ ಪೊಲೀಸ್ ಮುಖ್ಯಸ್ಥ ಬಿ.ಎಸ್. ಬಸ್ಸಿ ಹೇಳಿದರು. ವರದಿಯನ್ನು ಪ್ರಸ್ತುತ ಪುಷ್ಕರ್ ಸಾವಿನ ತನಿಖೆಗಾಗಿ ರಚಿಸಲಾಗಿದ್ದ ದೆಹಲಿ ಪೊಲೀಸರ ವಿಶೇಷ ತಂಡವು ಪರಿಶೀಲಿಸುತ್ತಿದೆ ಎಂದು ಅವರು ನುಡಿದರು. ಕೇಂದ್ರ ಸಚಿವ ಶಶಿ ತರೂರ್ ಅವರನ್ನು ವಿವಾಹವಾಗಿದ್ದ ಪುಷ್ಕರ್ (53) 2014ರ ಜನವರಿಯಲ್ಲಿ ದೆಹಲಿಯ ಲಕ್ಷುರಿ ಹೋಟೆಲ್ನಲ್ಲಿ ಸಾವನ್ನಪ್ಪಿದ್ದು ಪತ್ತೆಯಾಗಿತ್ತು. ಇದಕ್ಕೆ ಸ್ವಲ್ಪ ಸಮಯ ಮುಂಚೆ ಶಶಿ ತರೂರ್ ಅವರು ಪಾಕಿಸ್ತಾನದ ಪತ್ರಕರ್ತೆಯೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಪುಷ್ಕರ್ ಆಪಾದಿಸಿದ್ದರು. ಸಾವಿನ ಬಳಿಕ ಶಶಿ ತರೂರ್ ಪೊಲೀಸರ ಜೊತೆಗೆ ಸಂಪೂರ್ಣವಾಗಿ ಸಹಕರಿಸಿದ್ದರು.