ನವದೆಹಲಿ: ‘2012ರಲ್ಲಿ ನೆರೆಯ ಹರಿಯಾಣದಿಂದ ಸೇನಾ ಪಡೆಗಳು ಯಾವುದೇ ಅಧಿಕೃತ ಪ್ರಕಟಣೆ ಇಲ್ಲದೆ ದೆಹಲಿ ಕಡೆಗೆ ಹೊರಟಿದ್ದವು’ ಎಂಬುದಾಗಿ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ವರದಿ ಸತ್ಯ ಎಂಬುದಾಗಿ ಹಿರಿಯ ಕಾಂಗ್ರೆಸ್ ನಾಯಕ ಮನಿಷ್ ತಿವಾರಿ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಹಾಗೂ ನಿವೃತ್ತ ಸೇನಾ ದಂಡನಾಯಕ ವಿ.ಕೆ.ಸಿಂಗ್ ತಿರಸ್ಕರಿಸಿದ್ದಾರೆ.
‘ಮನಿಷ್ ತಿವಾರಿ ಅವರಿಗೆ ಈ ದಿನಗಳಲ್ಲಿ ಮಾಡಲು ಕೆಲಸವಿಲ್ಲ. ನಾನು ಬರೆದ ಪುಸ್ತಕವೇ ಇದೆ. ಅದನ್ನು ಓದಲು ಹೇಳಿ, ಪ್ರತಿಯೊಂದು ವಿಷಯವೂ ಅವರಿಗೆ ಸ್ಪಷ್ಟವಾಗುತ್ತದೆ’ ಎಂದು ವಿಕೆ ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಶನಿವಾರ ಮಾತನಾಡುತ್ತಿದ್ದ ಮಾಜಿ ವಾರ್ತಾ ಮತ್ತು ಪ್ರಸಾರ ಸಚಿವ ತಿವಾರಿ ಅವರು ಪತ್ರಿಕೆಯಲ್ಲಿ 2012ರ ಏಪ್ರಿಲ್ 4ರಂದು ಪ್ರಕಟಗೊಂಡಿದ್ದ ಸುದ್ದಿ ಸುಳ್ಳು ಎಂಬ ಆರೋಪಗಳನ್ನು ತಳ್ಳಿಹಾಕಿದ್ದರು. ‘ಪಡೆಗಳ ಅನಿರೀಕ್ಷಿತ ಚಲನವಲನ ದುರದೃಷ್ಟಕರ, ಆದರೆ ವಿಷಯ ಸತ್ಯ’ ಎಂದು ಅವರು ಪ್ರತಿಪಾದಿಸಿದ್ದರು. ‘ನಾನು ಆಗ ರಕ್ಷಣಾ ಸ್ಥಾಯಿ ಸಮಿತಿಯಲ್ಲಿದ್ದೆ. ಅದು ದುರದೃಷ್ಟಕರ, ಅದರೆ ವಿಷಯ ಸತ್ಯ’ ಎಂದು ಅವರು ಹೇಳಿದ್ದರು. ಆಗಿನ ಸೇನಾ ದಂಡನಾಯಕ ವಿ.ಕೆ. ಸಿಂಗ್ ಅವರು ಜನ್ಮದಿನದ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಹೋಗಿದ್ದ ಸಂದರ್ಭದಲ್ಲಿ 2012ರ ಜನವರಿ 16ರ ರಾತ್ರಿ ಹರಿಯಾಣದ ಹಿಸಾರ್ನಿಂದ ಸೇನಾ ತುಕಡಿಗಳು ಅಧಿಕೃತ ಪ್ರಕಟಣೆ ಇಲ್ಲದೆ ದೆಹಲಿಯತ್ತ ಹೊರಟಿದ್ದವು’ ಎಂದು ಪತ್ರಿಕೆ ವರದಿ ಮಾಡಿತ್ತು.