
ನಲ್ಗೊಂಡ, ಡಿ.7-ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕಿಡ್ನಿ ಮಾರಾಟ ಜಾಲವೊಂದನ್ನು ಪತ್ತೆಹಚ್ಚಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕಿಡ್ನಿ ಮಾರಾಟ ದಲ್ಲಾಳಿಗಳು, ಕಿಡ್ನಿ ದಾನಿಗಳು ಸೇರಿದ್ದು, ಕಿಡ್ನಿ ಸಹಿತ ಮಾನವ ದೇಹದ ವಿವಿಧ ಅಂಗಾಂಗಳನ್ನು ಅಪಹರಿಸಿ ಇವರು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಆರೋಪಿಗಳಾದ ಕೆ.ಸುರೇಶ್ ಸ್ವತಃ 2014ರ ಡಿಸೆಂಬರ್‌ನಲ್ಲಿ ತನ್ನ ಕಿಡ್ನಿ ಮಾರಾಟ ಮಾಡಿದ್ದು, ಈಗ ದಲ್ಲಾಳಿಯಾಗಿದ್ದಾನೆ. ಇತರೆ ಮೂವರೂ ಕೂಡ ತಮ್ಮ ಕಿಡ್ನಿಗಳನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಇವರನ್ನೆಲ್ಲಾ ಬಳಸಿಕೊಂಡು ಮಾರಾಟ ಜಾಲದ ದಲ್ಲಾಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದಂಧೆ ನಡೆಸುತ್ತಿದ್ದಾರೆ ಎಂದು ನಲ್ಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್‌ಜೀತ್ ದುಗ್ಗಾಲ್ ತಿಳಿಸಿದ್ದಾರೆ.
ಕಿಡ್ನಿ ಮಾರಾಟ ಜಾಲ ದೇಶದ ವಿವಿಧ ನಗರಗಳಲ್ಲಿ ತನ್ನ ಕಾರ್ಯಾಚರಣೆ ನಡೆಸುತ್ತಿದ್ದು, ವಿದೇಶಗಳಿಗೆ ಮಾನವ ಅಂಗಾಂಗಗಳನ್ನು ರವಾನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಖದೀಮರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ದುಗ್ಗಾಲ್ ಹೇಳಿದ್ದಾರೆ.
ಈ ಖದೀಮರು ಕರ್ನಾಟಕ, ತೆಲಂಗಾಣ, ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಮ್ಮ ಜಾಲವನ್ನು ಹೊಂದಿದ್ದು, ಹಣ ಮಾಡುವುದಕ್ಕಾಗಿಯೇ ದಂಧೆ ಗಿಳಿದಿದ್ದಾರೆ. ಕೆ.ಸುರೇಶ್ ಎಂಬ 22 ವರ್ಷದ ಯುವಕ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿದ್ದು, ಐಷಾರಾಮಿ ಜೀವನಕ್ಕಾಗಿ ಈ ವೃತ್ತಿಗಿಳಿದಿದ್ದಾನೆ. ಱಇನ್‌ನೀಡ್ ಕಿಡ್ನಿ.ಕಾಂೞ ವೆಬ್‌ಸೈಟ್‌ನಲ್ಲಿ ತನ್ನ ಸಂಪರ್ಕ ಸಂಖ್ಯೆ ನೀಡಿದ್ದು, ವ್ಯಕ್ತಿಗಳನ್ನು ಪ್ರಚೋದಿಸುತ್ತಾನೆ. ಇದೇ ಸುರೇಶ್ 2014ರಲ್ಲಿ ಶ್ರೀಲಂಕಾದ ಕೊಲಂಬೊದ ಆಸ್ಪತ್ರೆಯಲ್ಲಿ ತನ್ನ ಕಿಡ್ನಿ ಮಾರಾಟ ಮಾಡಿದ್ದಾನೆ.
ಸುರೇಶ್ ನಂತರ 15 ಜನರನ್ನು ಕರೆದೊಯ್ದು, ಅವರ ಕಿಡ್ನಿಗಳನ್ನು ತಲಾ 5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಪ್ರತಿ ಕಿಡ್ನಿಗೂ ಸುರೇಶ್ 50ಸಾವಿರ ರೂ. ಕಮಿಷನ್ ಪಡೆಯುತ್ತಿದ ಎಂದು ದುಗ್ಗಾಲ್ ತಿಳಿಸಿದ್ದಾರೆ.
ತಾನು ಇಂಟರ್‌ನೆಟ್ ಮೂಲಕ ಮನವೊಲಿಸಿದ ಕಿಡ್ನಿ ನೀಡುವ ವ್ಯಕ್ತಿಗಳನ್ನು ಗುಜರಾತ್‌ಗೆ ಕರೆದೊಯ್ದು ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ನಂತರ ಅಲ್ಲಿಂದ ನೇರವಾಗಿ ಕೊಲಂಬೋದ ವಿವಿಧ ಆಸ್ಪತ್ರೆಗಳಲ್ಲಿ ಅವರ ಕಿಡ್ನಿಗಳನ್ನು ಮಾರಾಟ ಮಾಡುವ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅವರು ತಿಲಿಸಿದ್ದಾರೆ. ಮಾನವ ಕಳ್ಳ ಸಾಗಣೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.