
ಪಠಾಣ್ಕೋಟ್: ಪಾಕಿಸ್ತಾನಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು ಎನ್ನಲಾದ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ ಮೇಲೇ ಈಗ ತನಿಖಾ ದಳಗಳ ಅನುಮಾನದ ಹುತ್ತ ಕೇಂದ್ರೀಕೃತವಾಗಿದೆ. ಉಗ್ರರು ತಮ್ಮನ್ನು ಅಪಹರಿಸಿದ್ದರು ಎಂಬ ಸಲ್ವಿಂದರ್ ಹೇಳಿಕೆ ಸುಳ್ಳಿರಬಹುದು ಎಂದು ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಶಂಕಿಸಿದೆ.
ಸಲ್ವಿಂದರ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ. ಅಲ್ಲದೆ, ಅವರ ಮೇಲೆ 5 ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳಿವೆ. ಮೇಲಾಗಿ, ಪಾಕಿಸ್ತಾನದ ಮಹಿಳಾ ಗೂಢಚರರ ಆಮಿಷಕ್ಕೆ ಒಳಗಾಗಿ ‘ಹನಿ ಟ್ರ್ಯಾಪ್’ಗೆ ಸಿಕ್ಕಿರಬಹುದು. ಇವರು ಪಠಾಣ್ಕೋಟ್ ದಾಳಿಕೋರರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡಿರಬಹುದು ಎಂದು ಎನ್ಐಎ ಶಂಕಿಸಿದೆ. ಅದಕ್ಕೆಂದೇ ಬುಧವಾರ ಸಲ್ವಿಂದರ್ ಮತ್ತು ಅವರ ಜತೆಗೆ ಅಪಹರಣಕ್ಕೊಳಗಾದ ಬಂಗಾರದ ಅಂಗಡಿ ಮಾಲೀಕ ರಾಜೇಶ್ ವರ್ಮಾ ಹಾಗೂ ಅಡುಗೆಭಟ್ಟ ಮದನ್ ಗೋಪಾಲ್ ಅವರನ್ನು ಎನ್ಐಎ ವಿಚಾರಣೆಗೆ ಒಳಪಡಿಸಿದೆ. ಈ ಮೂವರ ಹೇಳಿಕೆಗಳಲ್ಲೂ ವ್ಯತ್ಯಾಸ ಕಂಡುಬರುತ್ತಿರುವ ಕಾರಣ ಇವರನ್ನು ಘಟನಾ ಸ್ಥಳಕ್ಕೇ ಕರೆದೊಯ್ದು ಎನ್ಐಎ ವಿಚಾರಣೆ ನಡೆಸಿದೆ. ಸಿಂಗ್ರ ಡಿ.31ರ ಗುರುದ್ವಾರ ಭೇಟಿ ಕೂಡ ಸಂದೇಹ ಮೂಡಿಸಿದೆ.
-ಉದಯವಾಣಿ