ತಿರುವನಂತಪುರಂ, ಜ.5-ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಪಠಾಣ್ಕೋಟ್ ವಾಯುನೆಲೆಯ ಮೇಲೆ ನಡೆದ ಪಾಕಿಸ್ಥಾನ ಮೂಲದ ಉಗ್ರರ ದಾಳಿ ಸಂದರ್ಭ ವೀರಮರಣವನ್ನಪ್ಪಿದ ಕನ್ನಡಿಗ ಲೆಫ್ಟಿನೆಂಟ್ ಜನರಲ್ ನಿರಂಜನ್ಕುಮಾರ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್ ತಾಲೂಕಿನ ಇಳಂಬುಲಸ್ಸೇರಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮಧ್ಯಾಹ್ನ ನೆರವೇರಿತು.
ಬಂಧು-ಬಳಗದವರು, ಅಭಿಮಾನಿಗಳು, ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ನೆರೆದು, ಅಗಲಿದ ವೀರಯೋಧನಿಗೆ ಅಶೃತರ್ಪಣ ಸಲ್ಲಿಸಿದರು. ಕೇರಳ ಮುಖ್ಯಮಂತ್ರಿ ಅವರೂ ಸೇರಿದಂತೆ ಸಂಪುಟ ಸಹೋದ್ಯೋಗಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟಗೊಂಡು ದೇಶಕ್ಕಾಗಿ ಜೀವತ್ಯಾಗ ಮಾಡಿದ ನಿರಂಜನ್ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ನಿನ್ನೆ ಬೆಂಗಳೂರಿನ ಅವರ ನಿವಾಸದಿಂದ ಇಲ್ಲಿಗೆ ವಿಶೇಷ ಹೆಲಿಕಾಪ್ಟರ್ ಮೂಲಕ ತರಲಾಗಿದ್ದ ನಿರಂಜನ್ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದ ವರೆಗೂ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು.
ಕುಟುಂಬ ವರ್ಗದವರು ಮತ್ತು ಅವರ ಬಂಧು-ಬಳಗದವರ ಆಕ್ರಂಧನ ಮುಗಿಲು ಮುಟ್ಟಿತ್ತು. ಸಾವಿರಾರು ಜನ ಅಭಿಮಾನಿಗಳ ಕಂಬನಿಯೊಂದಿಗೆ ನಿರಂಜನ್ಕುಮಾರ್ ಅವರು ಬಯಲಿನಲ್ಲಿ ಲೀನವಾಗಿಹೋದರು.
ಯೋಧನ ಗೌರವಾರ್ಥ ಸರ್ಕಾರದ ವತಿಯಿಂದ ಅಂತ್ಯಕ್ರಿಯೆ ವೇಳೆ 21 ಕುಶಾಲ ತೋಪುಗಳನ್ನು ಹಾರಿಸಲಾಯಿತು. ಇಡೀ ಪ್ರದೇಶದಲ್ಲಿ ದುಃಖದ ನೀರವ ಮೌನ ಆವರಿಸಿತ್ತು. ತಮ್ಮ ಮಗನ ಅಂತ್ಯಕ್ರಿಯೆ ನೆರವೇರಿಸಿದ ನಂತರ ತಮ್ಮ ದುಃಖ ವ್ಯಕ್ತಪಡಿಸಿದ ತಂದೆ ಶಿವರಾಜ್ ಅವರು, ನನ್ನ ಮಗ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವುದು ದುಃಖವಾಗಿದ್ದರೂ ಹೆಮ್ಮೆ ಎನಿಸುತ್ತದೆ ಎಂದರು.