ಚಂಡೀಘಡ,ಡಿ.21-ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸಾಮಾನ್ಯ ಶಿಕ್ಷಣವನ್ನಾದರೂ ಪಡೆದಿರಬೇಕೆಂಬ ನಿಯಮವನ್ನು ಜಾರಿಗೊಳಿಸಿದ್ದ ಹರಿಯಾಣ ಸರ್ಕಾರ ಇದೀಗ ಮತ್ತೊಂದು ಹೊಸ ನಿಯಮ ಜಾರಿ ಮಾಡಿದೆ. ಇನ್ನು ಮುಂದೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅಭ್ಯರ್ಥಿಗಳು ಕಡ್ಡಾಯವಾಗಿ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿದೆ.
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಹರಿಯಾಣ ಸರ್ಕಾರ ಜಾರಿ ಮಾಡಿದ್ದ ನಿಯಮವನ್ನು ಎತ್ತಿ ಹಿಡಿದಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪುರುಷರು ಎಸ್ಸೆಸ್ಸೆಲ್ಸಿ, ಮಹಿಳೆಯರು 8ನೇ ತರಗತಿ ಹಾಗೂ ದಲಿತರು 5ನೇ ತರಗತಿಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಬೇಕೆಂಬ ನಿಯಮವನ್ನು ಜಾರಿ ಮಾಡಲಾಗಿತ್ತು.
ಈಗ ಅಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರ ನಗರ ಸ್ಥಳೀಯ ಸಂಸ್ಥೆ ಯ 1994ರ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯಂತೆ ನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವವರು ಪಿಯುಸಿ ಉತ್ತೀರ್ಣರಾಗಬೇಕು.
ಹರಿಯಾಣದಲ್ಲಿ ಫರೀದಬಾದ್, ಗುರುಂಗಾವ್, ಪಾಣಿಪತ್, ರೋಹಟಕ್, ಇಸಾರ್, ಪಂಚಕುಲ, ಯಮನನಗರ, ಅಂಬಾಲದಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಸರ್ಕಾರ ಜಾರಿ ಮಾಡಿರುವ ನೂತನ ನಿಯಮದಿಂದ ಅನೇಕ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.