ರಾಷ್ಟ್ರೀಯ

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಟಾರ್ಗೆಟ್ ಮಾಡಿದ್ದ ಇಬ್ಬರು ಶಂಕಿತ ಉಗ್ರರ ಬಂಧನ

Pinterest LinkedIn Tumblr

krisನವದೆಹಲಿ,ಡಿ.16-ಕ್ರಿಸ್‌ಮಸ್ ಮತ್ತು ಹೊಸ ಆಚರಣೆ ವೇಳೆ ದೇಶದಲ್ಲಿ  ವಿದ್ವಂಸಕ ಕೃತ್ಯ ನಡೆಸಲು ಹೊಂಚುಹಾಕಿದ್ದ ಇಬ್ಬರು ಶಂಕಿತ ಉಗ್ರರನ್ನು ನವದೆಹಲಿಯಲ್ಲಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮೂಲತಃ ಉತ್ತರಪ್ರದೇಶದ ಸಂಬಾಲ್ ಜಿಲ್ಲೆಯ ನಿವಾಸಿಗಳಾದ ಈ ಇಬ್ಬರು ಉಗ್ರರು ಪಾಕಿಸ್ತಾನದ ಲಷ್ಕರಿ ತೋಯ್ಬ ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದರು  ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆ  ನವದೆಹಲಿಗೆ ಬಂದಿದ್ದ ಈ ಉಗ್ರರು ಅನುಮಾನಸ್ಪದವಾಗಿ ತಿರುಗುತ್ತಿದ್ದ ವೇಳೆ ದೆಹಲಿಯ ವಿಶೇಷ ಜಂಟಿ ಘಟಕದ ಪೊಲೀಸರು ಬಂಧಿಸಿದ್ದಾರೆ.

ತನಿಖಾ ವೇಳೆ ಕೆಲವು ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿರುವ ಉಗ್ರರು ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ನವದೆಹಲಿ ಸೇರಿದಂತೆ ಮತ್ತಿತರ ಕಡೆ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ.

ಉಗ್ರರು ನೀಡಿರುವ ಮಾಹಿತಿಯಂತೆ ಉತ್ತರ ಪ್ರದೇಶ ಹಾಗೂ ದೇಶದ ಇತರೆ ಭಾಗಗಳಲ್ಲಿ ಉಗ್ರರು ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ವೇಳೆ ರಕ್ತದೋಕುಳಿ ನಡೆಸಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.  ನವದೆಹಲಿಯ ರಾಷ್ಟ್ರಪತಿ ಭವನ, ಪ್ರಧಾನಿ ನಿವಾಸ, ರಾಯಭಾರ ಕಚೇರಿ, ವಿಜಯ್ ಚೌಕ್, ಚಾಂದಿನಿ ಚೌಕ್, ಇಂಡಿಯಾ ಗೇಟ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಮಾಲ್‌ಗಳು, ಮಾರುಕಟ್ಟೆ ಪ್ರದೇಶ, ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳು ಇವರ ಗುರಿಯಾಗಿದ್ದವು.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ  ಎರಡೆರಡು ಬಾರಿ ತೆರಳಿದ್ದ ಈ ಉಗ್ರರು ಲಷ್ಕರ್-ಈ-ತೋಯ್ಬ , ಹಿಜ್ಬುಲ್ ಮುಜಾಯಿದ್ದೀನ್ ಸೇರಿದಂತೆ ಕೆಲವು ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಬೆಳೆದು ತರಬೇತಿಯನ್ನು ಪಡೆದಿದ್ದರು.  ಗುಂಡು ಹಾರಿಸುವುದು, ಬಾಂಬ್ ಸ್ಫೋಟ, ಅಪಹರಣ ಸೇರಿದಂತೆ ಮತ್ತಿತರ ದುಷ್ಕೃತ್ಯಗಳ ಬಗ್ಗೆಯೂ ಪಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆಯಲಾಗಿತ್ತು. ತದನಂತರ ಸ್ವದೇಶಕ್ಕೆ ಹಿಂದಿರುಗಿದ ಇವರು ಉತ್ತರ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ದೇಶದ ಬೇರೆ ಬೇರೆ ಕಡೆ ದಾಳಿ ನಡೆಸಲು ಸಂಚು ರೂಪಿಸಿದ್ದರು.

ಭಾರೀ ಭದ್ರತೆ: ಉಗ್ರರು ನೀಡಿದ ಸುಳಿವಿನ ಮೇರೆಗೆ ದೇಶದೆಲ್ಲೆಡೆ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ.ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ವೇಳೆ ಉಗ್ರರು ದುಷ್ಕೃತ್ಯ ನಡೆಸುವ ಸಾಧ್ಯತೆ ಇದೆ. ಪ್ರಮುಖವಾಗಿ ಸಮುದ್ರ ತೀರಗಳು, ಮತ್ತಿತರ ಕಡೆ ಹೆಚ್ಚಿನ ಭದ್ರತೆಕೈಗೊಳ್ಳುವಂತೆ ಗುಪ್ತಚರ ಇಲಾಖೆ ಎಲ್ಲಾ ರಾಜ್ಯಗಳ ಡಿಜಿಗಳಿಗೆ ಸೂಚನೆ ಕೊಟ್ಟಿದೆ.

Write A Comment