ರಾಷ್ಟ್ರೀಯ

ಕನಿಷ್ಠ ಜ್ಞಾನವಿಲ್ಲದ ಗುರು-ಶಿಷ್ಯರು : ಸಮೀಕ್ಷೆಯಲ್ಲಿ ಬಯಲಾಯ್ತು ಬಂಡವಾಳ

Pinterest LinkedIn Tumblr

guruನವದೆಹಲಿ, ಡಿ.14-ಭಾರತದ ಪ್ರಥಮ ರಾಷ್ಟ್ರಪತಿ ಯಾರು?
ಉತ್ತರ: ಡಾ.ಎಪಿಜೆ ಅಬ್ದುಲ್ ಕಲಾಂ!
ದೇಶದ ಮೊಟ್ಟಮೊದಲ ಪ್ರಧಾನ ಮಂತ್ರಿ ಯಾರು?
ಉತ್ತರ : ನರೇಂದ್ರ ಮೋದಿ!
ಆಶ್ಚರ್ಯಗೊಳ್ಳಬೇಡಿ, ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಹಾಗೂ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ನಮ್ಮ ಶಿಕ್ಷಕರು ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳನ್ನು ಹೇಗೆ ರೂಪಿಸುತ್ತಿದ್ದಾರೆ ಎಂಬುದಕ್ಕೆ ಈ ಉತ್ತರಗಳೇ ನಿದರ್ಶನವಾಗಿದೆ.

ದೇಶದ ವಿವಿಧ ರಾಜ್ಯಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಂಗ್ರಾಮ ಏಕೆ ಪ್ರಾರಂಭವಾಯಿತು ಎಂಬುದರ ಬಗ್ಗೆ ಅರಿವೇ ಇಲ್ಲ. ಸುಪ್ರೀಂಕೋರ್ಟ್  ಭಾರತದ ಅವಿಭಾಜ್ಯ ಅಂಗ ಎಂಬುದಾಗಲೀ, ಸ್ವದೇಶಿ ಚಳವಳಿ ಯಾವ ಕಾರಣಕ್ಕಾಗಿ ಆರಂಭವಾಯಿತು ಎನ್ನುವುದರ ಸಾಮಾನ್ಯ ಜ್ಞಾನವೂ ಇಲ್ಲ.

ಶೇ.55ರಷ್ಟು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಂಗ್ರಾಮ, ಶೇ.69 ರಷ್ಟು ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್ ಭಾರತದ ಅವಿಭಾಜ್ಯ ಅಂಗ ಎಂಬುದು, ಶೇ.60ರಷ್ಟು ವಿದ್ಯಾರ್ಥಿಗಳಿಗೆ ಸ್ವದೇಶಿ ಚಳವಳಿ ಹುಟ್ಟಿಕೊಂಡಿದ್ದರ ಉದ್ದೇಶವೇ ತಿಳಿದಿಲ್ಲ.ರಾಷ್ಟ್ರೀಯ ಶಿಕ್ಷಣ ಸಂಶೋಧನಾ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಮಂಡಳಿಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಇದು ಹೊರಬಿದ್ದಿದೆ. ಪಠ್ಯಪುಸ್ತಕ ಬದಲಾವಣೆಯಾಗಬೇಕೆಂಬ ಕೂಗು ಕೇಳಿಬರುತ್ತಿರುವ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಇಷ್ಟು ಸಾಮಾನ್ಯಜ್ಞಾನ ಇಲ್ಲದಿರುವುದು ಸೋಜಿಗ ಎನಿಸಿದೆ.

ದೇಶದ 6772 ಸರ್ಕಾರಿ, ಖಾಸಗಿ ಹಾಗೂ ಅನುದಾನರಹಿತ ಶಾಲೆಯ 24,486 ಶಿಕ್ಷಕರು, 1,88647 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.  ಇನ್ನೂ ಕುತೂಹಲಕಾರಿ ವಿಷಯವೆಂದರೆ ಜಲಿಯನ್‌ವಾಲ್‌ಬಾಗ್ ಹತ್ಯಾಕಾಂಡ ನಡೆದಿದ್ದು ಯಾರ ವಿರುದ್ಧ ಎಂಬುದರ ಬಗ್ಗೆಯಾಗಲೀ,ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಭಾರತದ ಪ್ರಮುಖ ನದಿಗಳ ಹೆಸರು ಕೂಡ ತಿಳಿದಿಲ್ಲ. ಶೇ.33ರಷ್ಟು ವಿದ್ಯಾರ್ಥಿಗಳಿಗೆ ಕೇಂದ್ರಾಡಳಿತ ಪ್ರದೇಶಗಳು ಯಾವುವು ಎಂಬುದರ ಬಗ್ಗೆಯೂ ಜ್ಞಾನವಿಲ್ಲ.  ಶೇ.74ರಷ್ಟು ವಿದ್ಯಾರ್ಥಿಗಳಿಗೆ ಸಂವಿಧಾನದ ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆಯೂ ತಿಳಿದಿಲ್ಲ. ರಾಜ್ಯದಲ್ಲಿ ಆಡಳಿತಯಂತ್ರ ಕುಸಿದಾಗ ಆಡಳಿತ ನಿರ್ವಹಣೆ ಮಾಡುವವರು ಯಾರು ಎಂಬುದಕ್ಕೆ ರಾಷ್ಟ್ರಪತಿ ಎಂದು ಯಾರೊಬ್ಬರೂ ಉತ್ತರವನ್ನೇ ನೀಡಿಲ್ಲ.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು 1857ರಲ್ಲೋ ಅಥವಾ 1947ರಲ್ಲೋ ಎಂಬ ಪ್ರಶ್ನೆಗೆ ಬಹುತೇಕ ವಿದ್ಯಾರ್ಥಿಗಳು 1947 ಎಂಬ ಉತ್ತರ ನೀಡಿದ್ದಾರೆ. ಭಾರತದ ಪ್ರಥಮ ರಾಷ್ಟ್ರಪತಿ, ಮೊಟ್ಟ ಮೊದಲ ಪ್ರಧಾನ ಮಂತ್ರಿ ಎಂಬುದಕ್ಕೂ ಸ್ಪಷ್ಟ ಉತ್ತರ ನೀಡಿಲ್ಲ. ಕೆಲವು ವಿದ್ಯಾರ್ಥಿಗಳು ಮೊದಲ ರಾಷ್ಟ್ರಪತಿ ಅಬ್ದುಲ್ ಕಲಾಂ ಎಂದರೆ ಇನ್ನೂ ಕೆಲವು ವಿದ್ಯಾರ್ಥಿಗಳು ಮೊಟ್ಟ ಮೊದಲ ಪ್ರಧಾನಿ ನರೇಂದ್ರಮೋದಿ ಎಂದು ಉತ್ತರಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಭಾರತೀಯರು ಹೋರಾಟ ನಡೆಸಿದ್ದು ಯಾರ ವಿರುದ್ಧ ಎಂಬುದಕ್ಕೆ ಬ್ರಿಟೀಷರು ಎಂಬ ಉತ್ತರವನ್ನು ಸಹ ವಿದ್ಯಾರ್ಥಿಗಳು ನೀಡಿಲ್ಲ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಕೆಲವು ಪ್ರಶ್ನೆಗಳಿಗೆ ಶಿಕ್ಷಕರೂ ಸಹ ಉತ್ತರಿಸದಿರುವುದು ವಿಷಾದದ ಸಂಗತಿ.  ಇಂಗಾಲದ ಡೈಯಾಕ್ಸೈಡ್ ಮನುಷ್ಯನ ಜೀವನಕ್ಕೆ ಅತ್ಯಗತ್ಯವೇ ಎಂಬುದಕ್ಕೆ ಶೇ.50 ರಷ್ಟು ವಿದ್ಯಾರ್ಥಿಗಳು ಇಲ್ಲ ಎಂದು ತಲೆಯಾಡಿಸಿದ್ದಾರೆ.

Write A Comment