ರಾಷ್ಟ್ರೀಯ

ದಾದ್ರಿ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ:  ಅಖ್ಲಾಕ್ ಕುಟುಂಬ

Pinterest LinkedIn Tumblr

dADRI

ನೊಯ್ಡ, ಡಿ.9: ಆತನ ಶರೀರದ ಮೇಲಿನ ಗಾಯಗಳೇನೋ ಮಾಯತೊಡಗಿವೆ….ಆದರೆ ಆತನ ಹೃದಯದಲ್ಲಿನ್ನೂ ನೋವು ಉಳಿದುಕೊಂಡಿದೆ, ಹಾಗೆನ್ನುವುದಕ್ಕೆ ಆತನ ಮಾತುಗಳೇ ಸಾಕು….ಇನ್ಯಾವ ಸಾಕ್ಷವೂ ಬೇಡ.

ಆ ದುಃಸ್ವಪ್ನವನ್ನು ಮರೆಯಲು ನನಗಿನ್ನೂ ತುಂಬ ಸಮಯ ಬೇಕು ಎಂದವನ ಹೆಸರು ದ್ಯಾನಿಶ್ ಅಖ್ಲಾಕ್. ಆತನಿಗಿನ್ನೂ ಬರೀ 22 ವರ್ಷ… ಆದರೆ ಮುಖದಲ್ಲಿನ ಗಾಯಗಳ ಕಲೆಗಳು, ಅಚ್ಚೊತ್ತಿರುವ ಯಾತನೆಯಿಂದ ಆತ ತುಂಬಾ ವಯಸ್ಸಾದವನಂತೆ ಕಾಣುತ್ತಿದ್ದಾನೆ.

ಸೆ.28ರಂದು ರಾತ್ರಿ ದಾದ್ರಿಯ ಬಿಸಾಡಾದಲ್ಲಿ ತನ್ನ ತಂದೆ ಮುಹಮ್ಮದ್ ಅಖ್ಲಾಕ್‌ರನ್ನು ಗೋಮಾಂಸ ಸೇವನೆಯ ಆರೋಪದಲ್ಲಿ ಅಮಾನುಷವಾಗಿ ಥಳಿಸಿ ಕೊಂದ ಮತಾಂಧ ಗುಂಪಿನ ದಾಳಿಯಲ್ಲಿ ದಾನಿಶ್ ಬದುಕುಳಿದಿದ್ದಾನೆ. ತಾನು ಬದುಕುತ್ತೇನೆಂದು ಅವನು ಭಾವಿಸಿಯೇ ಇರಲಿಲ್ಲ.

‘ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ದೊಣ್ಣೆಗಳಿಂದ ಥಳಿಸಿದ್ದರು. ನಾನು ನನ್ನ ತಲೆಯನ್ನು ಕೈಗಳಿಂದ ಮುಚ್ಚಿಕೊಂಡು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ಅವರು ಬಿಟ್ಟೂಬಿಡದೆ ತುಂಬಾ ಹಿಂಸಾತ್ಮಕವಾಗಿ ನನ್ನ ಮೇಲೆ ದಾಳಿ ನಡೆಸುತ್ತಿದ್ದರು. ನಾನು ಕುಸಿದು ಬೀಳುವವರೆಗೂ ಅವರು ನನ್ನನ್ನು ಥಳಿಸುತ್ತಲೇ ಇದ್ದರು. ನನ್ನ ಶರೀರದೊಳಗಿನಎಲ್ಲ ಮೂಳೆಗಳೂ ಹುಡಿಯಾಗಿವೆಯೇನೋ ಎಂದು ನಾನು ಭಾವಿಸಿದ್ದೆ. ಯಾರೋ ನನ್ನ ಕಣ್ಣಿಗೆ ದೊಣ್ಣೆಯಿಂದ ಹೊಡೆದರು, ಚೇತರಿಸಿಕೊಳ್ಳುವಷ್ಟರಲ್ಲಿಯೇ ಇನ್ಯಾರೋ ತಲೆಗೆ ಬಲವಾಗಿ ಪ್ರಹಾರ ಮಾಡಿದ್ದರು. ಒಂದರ ಮೇಲೊಂದು ಹೊಡೆತಗಳು ಬೀಳುತ್ತಲೇ ಇದ್ದವು’ ಎಂದು ದಾನಿಶ್ ಹೇಳುತ್ತಿದ್ದರೆ, ಭಯ ತುಂಬಿಕೊಂಡಿದ್ದ ಆತನ ಕಣ್ಣುಗಳು ಶೂನ್ಯವನ್ನು ದಿಟ್ಟಿಸುತ್ತಿದ್ದವು.

ದುಷ್ಕರ್ಮಿಗಳ ಗುಂಪು ಸ್ಥಳದಿಂದ ಕಾಲ್ತೆಗೆದಾಗ ಅಖ್ಲಾಕ್ ಸತ್ತು ಬಿದ್ದಿದ್ದರೆ ದಾನಿಶ್ ಪ್ರಜ್ಞಾಹೀನನಾಗಿದ್ದ. ಮಿದುಳಿಗೆ ಎರಡು ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಮತ್ತು ಎರಡು ತಿಂಗಳ ಸುದೀರ್ಘ ವೈದ್ಯಕೀಯ ಕಾಳಜಿಯ ಬಳಿಕ ಇದೀಗ ಆತ ಮೆಲ್ಲಗೆ ನಡೆದಾಡುತ್ತಿದ್ದಾನೆ.

ಆದರೆ ದಾನಿಶ್ ತುಂಬ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ನೆನಪುಗಳು ಮನಸ್ಸಿಗೆ ಮತ್ತೆ ಮತ್ತೆ ಗಾಯಗಳನ್ನುಂಟು ಮಾಡುತ್ತ ಆತನನ್ನು ಕಾಡುತ್ತಿವೆ. ಆದರೆ ಸರಕಾರದಿಂದ ತನ್ನ ಕುಟುಂಬಕ್ಕೆ ಸಿಕ್ಕಿರುವ ಬೆಂಬಲದಿಂದಾಗಿ ಆತ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿಲ್ಲ. ಯಾರಿಗೆ ಗೊತ್ತು…ಮುಂದೊಂದು ದಿನ ಆತ ಬಿಸಾಡಾಕ್ಕೆ ಮರಳಲೂಬಹುದು!

ತಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲ ಬಿಸಾಡಾದಲ್ಲಿಯೇ. ತನ್ನೆಲ್ಲ ನೆನಪುಗಳೂ ಬಿಸಾಡಾದೊಂದಿಗೇ ಬೆಸೆದುಕೊಂಡಿವೆ. ತಲೆಮಾರುಗಳಿಂದ ತನ್ನ ಕುಟುಂಬ ಅಲ್ಲಿಯೇ ವಾಸಿಸುತ್ತಿದೆ.ಅಲ್ಲಿಗೆ ಮರಳುವ ಸಾಧ್ಯತೆಯನ್ನು ತಾನು ತಳ್ಳಿ ಹಾಕುವುದಿಲ್ಲ, ಆದರೆ ಈ ನೋವಿನಿಂದ..ದುಃಸ್ವಪ್ನದಿಂದ ಪಾರಾಗಲು ತುಂಬಾ ಸಮಯ ಬೇಕು ಎಂದು ಆತ ನಿಡುಸುಯ್ದ. ದಾನಿಶ್‌ಗೇನೋ ಹುಟ್ಟೂರಿಗೆ ಮರಳುವ ಆಸೆಯಿದೆ, ಆದರೆ ಆತನ ಕುಟುಂಬ ಆ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ದಾನಿಶ್ ದಿಲ್ಲಿಯಲ್ಲಿ ವಾಯುಪಡೆಯು ತನ್ನ ಅಣ್ಣ ಸರ್ತಾಜ್‌ಗೆ ಒದಗಿಸಿರುವ ನಿವಾಸದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ.

ಎಲ್ಲ ಹೋರಾಟಕ್ಕೂ ಸಿದ್ಧ: ತನ್ಮಧ್ಯೆ, ಅಖ್ಲಾಕ್ ಹತ್ಯೆ ಪ್ರಕರಣದಲ್ಲಿ ತನಿಖೆ ಮುಂದುವರಿಯುವುದನ್ನು ತನ್ನ ಕುಟುಂಬವು ಬಯಸುತ್ತಿಲ್ಲ ಎಂದು ಮಾಧ್ಯಮಗಳ ಒಂದು ವರ್ಗದ ವರದಿಗಳನ್ನು ಸರ್ತಾಜ್ ನಿರಾಕರಿಸಿದರು. ನ್ಯಾಯಕ್ಕಾಗಿ ನಾವು ಎಲ್ಲ ಹೋರಾಟಗಳನ್ನೂ ನಡೆಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಉತ್ತರ ಪ್ರದೇಶದ ಪೊಲೀಸರ ಈವರೆಗಿನ ತನಿಖೆ ನನಗೆ ತೃಪ್ತಿಯನ್ನುಂಟು ಮಾಡಿದೆ. ನಮಗೀಗ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದಷ್ಟೇ ನಾನು ಹೇಳಿದ್ದೆ ಎಂದು ಸರ್ತಾಜ್ ತನ್ನ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಮನೆಗಳ ಬದಲು ಹಣ: ಅಖ್ಲಾಕ್ ಕುಟುಂಬದ ಸದಸ್ಯರಿಗೆ ನಾಲ್ಕು ಮನೆಗಳನ್ನು ಮಂಜೂರು ಮಾಡುವುದಾಗಿ ಎರಡು ತಿಂಗಳ ಹಿಂದೆ ಪ್ರಕಟಿಸಿದ್ದ ಉ.ಪ್ರ.ಸರಕಾರವು ಫ್ಲಾಟ್‌ಗಳ ಖರೀದಿಗಾಗಿ ಅವರಿಗೆ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ಹಣವನ್ನೊದಗಿಸಲು ನಿರ್ಧರಿಸಿದೆ. ತಮಗೆ ತಲಾ 9.5 ಲ.ರೂ.ಗಳ ನಾಲ್ಕು ಚೆಕ್‌ಗಳು ದೊರೆಯಲಿವೆ ಎಂದು ಕುಟುಂಬದ ಸದಸ್ಯರೋರ್ವರು ತಿಳಿಸಿದರು.

Write A Comment