ನವದೆಹಲಿ: ಬಹು ಚರ್ಚಿತ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೆತ್ತಿಕೊಳ್ಳುವುದರಿಂದ ಅವರ ಜನಪ್ರಿಯತೆ ಹೆಚ್ಚಾಗುತ್ತದೆ ಎಂದು ಶಿವಸೇನೆ ಶನಿವಾರ ಹೇಳಿದೆ.
ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಶಿವಸೇನೆಯು, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತಂತೆ ಮಾತನಾಡುತ್ತಿರುವ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರ ಪ್ರಶ್ನೆಗಳಿಗೆ ಅಡಳಿತಾರೂಢ ಕೇಂದ್ರದ ಭಾರತೀಯ ಜನತಾ ಪಕ್ಷ ಉತ್ತರಿಸಬೇಕಿದೆ. ಕೇಂದ್ರದಲ್ಲಿ ಇದೀಗ ಬಿಜೆಪಿಗೆ ಶಕ್ತಿಯಿದೆ. ರಾಮ ಮಂದಿರ ನಿರ್ಮಾಣ ಕುರಿತಂತೆ ಆರ್ಎಸ್ಎಸ್ ಮಾತುಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಮಂದಿರ ನಿರ್ಮಾಣ ಕುರಿತಂತೆ ಮಾತನಾಡುವ ಬದಲು ನಾಯಕರು ದಿನಾಂಕವನ್ನು ನಿಗದಿಪಡಿಸಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲೆಂಬುದು ನಮ್ಮ ಸಲಹೆಯಾಗಿದೆ ಎಂದು ಹೇಳಿಕೊಂಡಿದೆ.
ರಾಮಮಂದಿರ ನಿರ್ಮಾಣ ಕುರಿತಂತೆ ಪ್ರತಿಭಟನೆ ಹಾಗೂ ಆಗ್ರಹ ವ್ಯಕ್ತಪಡಿಸುತ್ತಿರುವವರನ್ನು ಇಂದು ಉಗ್ರ ಅಜ್ಮಲ್ ಕಸಬ್ ನಂತೆ ನೋಡಲಾಗುತ್ತಿದೆ. ಮಂದಿರ ನಿರ್ಮಾಣ ಕುರಿತಂತೆ ಮೋದಿಯವರು ಗಮನ ಹರಿಸಿದರೆ, ದೇಗುಲ ನಿರ್ಮಾಣ ಕಾರ್ಯ ಯಶಸ್ವಿಯಾಗುತ್ತದೆ. ಮೋದಿಯವರಿಗೆ ಆ ಶಕ್ತಿಯಿದೆ. ದೇಗುಲ ನಿರ್ಮಾಣದಿಂದ ಮೋದಿಯವರ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದೆ.
ಇದೇ ವೇಳೆ ರಾಮ ದೇಗುಲ ನಿರ್ಮಾಣ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯು, ರಾಮಮಂದಿರ ನಿರ್ಮಾಣ ವಿಷಯದಲ್ಲಿ ತಡಮಾಡಬಾರದು. ಈ ಬಗ್ಗೆ ಇರುವ ಎಲ್ಲಾ ಸಮಸ್ಯೆ ಹಾಗೂ ಗೊಂದಲಗಳನ್ನು ಪರಿಹರಿಸಿಕೊಂಡು ಸಾಧ್ಯವಾದಷ್ಟು ಶೀಘ್ರದಲ್ಲಿ ದೇಗುಲವನ್ನು ನಿರ್ಮಾಣ ಮಾಡಬೇಕಿದೆ ಎಂದು ಹೇಳಿದೆ.
1990ರಲ್ಲಿ ಕರ್ ಸೇವಾ (ಯಾತ್ರಿಕರ ಮುಫತ್ತಾದ ಸೇವೆ ಹಾಗೂ ಕೆಲಸ)ದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಸಹೋದರರಾದ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ ಅವರಿಗೆ ಗೌರವ ಸಲ್ಲಿಸುವ ಸಲ್ಲಿಸುವುದಕ್ಕಾಗಿ ಡಿ.2 ರಂದು ಕೋಲ್ಕತಾದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು, ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತಂತೆ ಮಾತನಾಡಿದ್ದರು.
ರಾಮ ದೇಗುಲ ನಾನು ಜೀವಂತವಿರುವಾಗಲೇ ನಿರ್ಮಾಣವಾಗಬೇಕು. ದೇಗುಲವನ್ನು ನೋಡಿ ಕಣ್ತುಂಬಿಕೊಳ್ಳಬೇಕು. ಆದರೆ, ದೇಗುಲ ಯಾವಾಗ ಮತ್ತು ಹೇಗೆ ನಿರ್ಮಾಣವಾಗುತ್ತದೆ ಎಂಬುದರ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ಈ ಬಗ್ಗೆ ನಾವು ಸದಾಕಾಲ ಎಚ್ಚರಿಕೆಯಿಂದ ಹಾಗೂ ತಯಾರಾಗಿರಬೇಕಿದೆ. ದೇಗುಲ ವಿಚಾರದಲ್ಲಿ ಉತ್ಸಾಹ ಮತ್ತು ವಿವೇಕವನ್ನು ಬಳಸಿಕೊಂಡು ನಾವು ಈ ಕೆಲಸವನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಹೇಳಿದ್ದರು.
ಮೋಹನ್ ಭಾಗವತ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಶಿವಸೇನೆಯು ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಆರ್ಎಸ್ಎಸ್ ಗೆ ಎಚ್ಚರಿಕೆ ನೀಡಿತ್ತು.
ಈ ಕುರಿತಂತೆ ಮಾತನಾಡಿದ್ದ ಸಂಜಯ್ ರಾವತ್, ರಾಮ ದೇಗುಲ ನಿರ್ಮಾಣ ಮಾಡಬೇಕೆಂಬ ಇಚ್ಛೆ ನಮಗೂ ಇದೆ. ಆದರೆ ಅದಕ್ಕೆ ಸಮಯ ಕೂಡಿ ಬರಬೇಕಿದೆ. ರಾಮ ದೇಗುಲ ಕುರಿತ ವಿಚಾರವನ್ನು ಉತ್ತರಪ್ರದೇಶದ ಚುನಾವಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ರಾಮ ದೇಗುಲ ವಿಚಾರವನ್ನು ರಾಜಕೀಯ ಮಾಡಬಾರದು. ವಿಚಾರವನ್ನು ರಾಜಕೀಯ ಮಾಡಿದರೆ ಜನರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದರು.