ರಾಷ್ಟ್ರೀಯ

ಪರಿಹಾರ ಸಾಮಗ್ರಿಗಳ ಮೇಲೆ ಅಮ್ಮನ ನಗುಮುಖದ ಫೋಟೊ ಕಂಡು ರೊಚ್ಚಿಗೆದ್ದ ಜನ

Pinterest LinkedIn Tumblr

jay

ಚೆನ್ನೈ, ಡಿ.5: ಒಂದೆಡೆ ತುತ್ತು ಅನ್ನ, ಬೊಗಸೆ ನೀರಿಗಾಗಿ ಹಾಹಾಕಾರ, ಇನ್ನೊಂದೆಡೆ ರಕ್ಷಣೆಗಾಗಿ ಮೊರೆ, ಇದರ ಮಧ್ಯೆ ಜನರ ಆಕ್ರೋಶಕ್ಕೆ ಕಾರಣವಾದ ಪರಿಹಾರ ಸಾಮಗ್ರಿಗಳ ಮೇಲಿನ ಅಮ್ಮನ ನಗುಮುಖದ ಭಾವಚಿತ್ರ. ಅಮ್ಮನ ಜೊತೆ ಕಾರ್ಯಕರ್ತರ ಮುಖಗಳೂ ರಾರಾಜಿಸುತ್ತಿದ್ದ ಲೇಬಲ್‌ಗಳನ್ನು ಕಂಡ ಅನೇಕರು ಕೆಂಡಾಮಂಡಲವಾದರು. ಜನ ಸಾಯುತ್ತಿರುವಾಗಲೂ ಇವರ ರಾಜಕಾರಣವೇ ಎಂದು ಮರುಗಿದರು. ಇದು ಮಳೆಯ ರುದ್ರನರ್ತನಕ್ಕೆ ಸಿಕ್ಕಿ ಲಕ್ಷಾಂತರ ಜನ ನಿರಾಶ್ರಿತರಾಗಿ ಬದುಕಲು ಸೆಣಸಾಡುತ್ತಿರುವ ತಮಿಳುನಾಡಿನ ಚೆನ್ನೈ, ಕಾಂಚಿಪುರಂ ಮತ್ತಿತರೆಡೆಗಳಲ್ಲಿ ಕಂಡುಬಂದ ದೃಶ್ಯ.

ಕಳೆದ ಕೆಲವು ದಿನಗಳಿಂದ ದ್ವೀಪವಾಗಿದ್ದ ಚೆನ್ನೈಯಲ್ಲಿ ನಿನ್ನೆ ಮಳೆ ಸ್ವಲ್ಪ ಬಿಡುವು ಕೊಟ್ಟಾಗ ಸೇನಾಪಡೆಗಳ ಯೋಧರು ಜನತೆಗೆ ಆಹಾರ, ನೀರು, ಹೊದಿಕೆ, ಔಷಧ ಮುಂತಾದವುಗಳನ್ನು ಭರದಿಂದ ಪೂರೈಸುತ್ತಿದ್ದರು. ಅವರು ಪೂರೈಸುತ್ತಿದ್ದ ಎಲ್ಲಾ ಪ್ಯಾಕೆಟ್‌ಗಳ ಮೇಲೆಯೂ ಅಮ್ಮ (ಮುಖ್ಯಮಂತ್ರಿ ಜಯಲಲಿತಾ) ಹಾಗೂ ಎಐಎಡಿಎಂಕೆ ಕಾರ್ಯಕರ್ತರನ್ನೊಳಗೊಂಡ ದೊಡ್ಡ ದೊಡ್ಡ ಲೇಬಲ್‌ಗಳು ರಾರಾಜಿಸುತ್ತಿದ್ದವು. ಸಂಕಷ್ಟದಲ್ಲಿರುವ ಲಕ್ಷಾಂತರ ಜನ, ಪ್ರಾಣರಕ್ಷಣೆಗಾಗಿ ಮೊರೆಯಿಡುತ್ತಿರುವಾಗ, ಇವರಿಗೆ ಇಷ್ಟೆಲ್ಲಾ ಲೇಬಲ್ ಪ್ರಿಂಟ್ ಮಾಡಿ, ಪ್ಯಾಕೆಟ್‌ಗಳಿಗೆ ಹಚ್ಚಲು ಸಮಯ ಹೇಗೆ ಸಿಕ್ಕಿತು? ಇದನ್ನೆಲ್ಲ ಎಲ್ಲಿ, ಯಾರು ಮಾಡಿಸಿದರು? ಎಂಬ ಪ್ರಶ್ನೆಗಳನ್ನು ಜನ ತಮ್ಮ ತಮ್ಮಲ್ಲೇ ಕೇಳಿಕೊಳ್ಳುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಹೀಗೆ ಮಾನವ ಶಕ್ತಿ, ಹಣ, ಸಮಯ ಹಾಳು ಮಾಡುವ ಅವಶ್ಯಕತೆ ಇದೆಯೇ? ಸಾವಿನಲ್ಲೂ ರಾಜಕೀಯವೇ?….. ಇದು ಶಿವ ಪಾಪಿಳ್ಳೈ ಎಂಬ ನಾಗರಿಕರ ಪ್ರಶ್ನೆ, ಇದೇ ವೇಳೆ ಪರಿಹಾರ ಕಾರ್ಯದ ಪರಿಶೀಲನೆಗಾಗಿ ಸ್ಥಳಕ್ಕೆ ಬಂದ ಹಿರಿಯ ಸಚಿವರಾದ ನಾಡಂ ವಿಶ್ವನಾಥನ್, ಸೆಲ್ಲೂರ್ ರಾಜು ಹಾಗೂ ಗೋಕುಲ್ ಇಂದಿರಾ ಅವರು ಆಗಮಿಸಿದಾಗ ಆರ್‌ಕೆ ನಗರದಲ್ಲಿ ಜನ ಅವರ ವಿರುದ್ಧ ಘೋಷಣೆ ಕೂಗಿ ಘೇರಾವು ಹಾಕಿದ ಘಟನೆಯೂ ನಡೆಯಿತು.

Write A Comment